Home » ಲೈಟ್ ಫಿಶಿಂಗ್ ನಿಷೇಧಿಸಿ : ಮೀನುಗಾರರ ಬೃಹತ್‌ ಪ್ರತಿಭಟನೆ
 

ಲೈಟ್ ಫಿಶಿಂಗ್ ನಿಷೇಧಿಸಿ : ಮೀನುಗಾರರ ಬೃಹತ್‌ ಪ್ರತಿಭಟನೆ

ಶಾಸಕ ಗಂಟಿಹೊಳೆ ಭಾಗಿ

by Kundapur Xpress
Spread the love

ಕುಂದಾಪುರ : ಅವೈಜ್ಞಾನಿಕ ಲೈಟ್‌ ಫಿಶಿಂಗ್‌ (ಬೆಳಕು ಮೀನುಗಾರಿಕೆ), ಬುಲ್‌ಟ್ರಾಲ್ ಮೀನುಗಾರಿಕೆಯನ್ನು ಕೂಡಲೇ ನಿಷೇಧಿಸುವಂತೆ ಒತ್ತಾಯಿಸಿ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ತ್ರಾಸಿಯ ಕಡಲ ಕಿನಾರೆಯಲ್ಲಿ ಸಾವಿರಾರು ದೋಣಿಗಳನ್ನು ಲಂಗರು ಹಾಕಿ, ಕರಾವಳಿಯ 3 ಜಿಲ್ಲೆಗಳ 3 ಸಾವಿರಕ್ಕೂ ಮಿಕ್ಕಿ ಮೀನುಗಾರರಿಂದ ಬೃಹತ್ ಸಭೆ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು

ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಮಾತನಾಡಿ, ಕಳೆದ ಒಂದೂವರೆ ವರ್ಷದಿಂದ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಒಂದೇ ಒಂದು ಮೀನುಗಾರಿಕೆ ಮನೆ ಮಂಜೂರಾಗಿಲ್ಲ. ಕಳೆದ ವರ್ಷ ಮಂಜೂರಾಗಿದ್ದ ಮನೆಗಳನ್ನು ಕೂಡ ತಡೆ ಹಿಡಿಯಲಾಗಿದೆ. ಕಳೆದ 3-4 ವರ್ಷಗಳಿಂದ ಮರವಂತೆ ಹೊರ ಬಂದರು ಮಂಜೂರಾದ ಅನುದಾನ ವಿವಿಧ ಕಾರಣಗಳಿಂದ ಬಳಕೆಯಾಗಿಲ್ಲ. ಗಂಗೊಳ್ಳಿ ಬಂದರು ಜೆಟ್ಟಿ ಪುನರ್ ನಿರ್ಮಾಣವಾಗಿಲ್ಲ ನಾಡ ದೋಣಿಯವರ ಕಷ್ಟ ಅರ್ಥಮಾಡಿಕೊಳ್ಳಬೇಕಾದುದು ಸರಕಾರದಿಂದ ಹಿಡಿದು ಸಮಾಜದ ಕರ್ತವ್ಯ, ಅವೈಜ್ಞಾನಿಕವಾಗಿ ನಡೆಯುತ್ತಿರುವ ಲೈಟ್ ಫಿಶಿಂಗ್ ಸಮಸ್ಯೆ ಬಗ್ಗೆ ಅಧಿಕಾರಿಗಳು ಹಾಗೂ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಮೀನುಗಾರಿಕೆ ಹಾಗೂ ಮೀನುಗಾರರನ್ನು ಉಳಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು

ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸುಮಾರು 1.5 ಲಕ್ಷ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ಮೀನುಗಾರರಿದ್ದು, ಅವೈಜ್ಞಾನಿಕ ಮೀನುಗಾರಿಕೆ ನಡೆಸುವುದರಿಂದ ನಾಳೆ ಸಮಸ್ಯೆಯಾಗುತ್ತದೆ. ತೊಂದರೆಯಾಗುತ್ತದೆ, ಬರಗಾಲ ಬರುತ್ತದೆ ಎಂಬುದನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಮೀನಿಗೆ ಬರಗಾಲ ಬಂದಾಗ ಚಿಂತೆ ಮಾಡಿ ಯಾವುದೇ ಪ್ರಯೋಜನವಿಲ್ಲ  ಪ್ರಕೃತಿಗೋಸ್ಕರ ಸಾಂಪ್ರದಾಯಿಕ ರೀತಿಯಲ್ಲಿ ಮೀನುಗಾರಿಕೆ ನಡೆಸಬೇಕು. ಎಲ್ಲರೂ ದುಡಿಮೆಯನ್ನು ಹಂಚಿ ತಿನ್ನುವಂತಾಗಬೇಕು, ಮೀನುಗಾರರು ದಾರಿ ಮೇಲೆ ಬೀಳುವ ಪರಿಸ್ಥಿತಿ ಬರಬಾರದು ಎಂದು ಅವರು ಹೇಳಿದರು.

 

Related Articles

error: Content is protected !!