ಕೋಟ: ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಕಾರ್ಕಡ ಬಡಾಹೋಳಿ, ಚಿತ್ರಪಾಡಿ, ಮೂಡುಹೋಳಿ ಭಾಗದಲ್ಲಿ ಮಳೆಗಾಲದಲ್ಲಿ ಉದ್ಭವಿಸುವ ನೆರೆ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಸ್ಥಳೀಯ ರೈತರು ಜು.18ರಂದುಸಾಲಿಗ್ರಾಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಈ ಭಾಗದಲ್ಲಿ ಪ್ರತಿವರ್ಷ ಕೃಷಿ ಭೂಮಿ, ಮನೆಗಳು ಸಣ್ಣ ಮಳೆಗೂ ಜಲಾವೃತ್ತವಾಗುತ್ತಿವೆ. ಈ ಬಾರಿ 20ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದ್ದು, 100 ಎಕರೆ ಕೃಷಿ ಪ್ರದೇಶ ನಾಶವಾಗಿದೆ. ಜು.4ರಂದು ಕಾಣಿಸಿಕೊಂಡ ನೆರೆ ಇದುವರೆಗೂ ಕಡಿಮೆಯಾಗಿಲ್ಲ.ಚಿತ್ರಪಾಡಿ ವ್ಯಾಪ್ತಿಯ 60 ಎಕರೆ ಕೃಷಿ ಭೂಮಿ ಇನ್ನೂ ನಾಟಿ ಮಾಡಿಲ್ಲ. ಇಲ್ಲಿನ ಹಿರೇಹೊಳೆಯಲ್ಲಿ ಹೂಳು ತುಂಬಿದ್ದೆ ಈ ಸಮಸ್ಯೆಗೆ ಕಾರಣ ಎಂದು ರೈತರ ಪರವಾಗಿ ರಮೇಶ್ ಮೆಂಡನ್ ತಿಳಿಸಿದರು.
ಚಿತ್ರಪಾಡಿಯಿಂದ ಹರಿಯುವ ಹೊಳೆಯ ನೀರು ಸರಾಗವಾಗಿ ಹರಿಯಲು ಅಲ್ಲಲ್ಲಿ ಇರುವ ದಿಬ್ಬಗಳು ತಡೆಯಾಗಿವೆ. ಇಲ್ಲಿ 12 ವರ್ಷದ ಹಿಂದೆ ಹೂಳು ತೆಗೆಯಲಾಗಿತ್ತು. ಇದೀಗ ಐದಾರು ವರ್ಷದಿಂದ ಮತ್ತೆ ನೆರೆ ಸಮಸ್ಯೆ ಉಂಟಾಗಿದೆ. ಆದ್ದರಿಂದ ಈ ಎಲ್ಲ ಸಮಸ್ಯೆ ಬಗ್ಗೆ ಕಂದಾಯ ಇಲಾಖೆ ಸರಕಾರಕ್ಕೆ ವರದಿ ನೀಡಬೇಕು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ರೈತರು, ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರತಿಭಟನೆ :- ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಸೆಳೆಯುವ ನಿಟ್ಟಿನಲ್ಲಿ ಜು.20ರಂದು ಬೆಳಗ್ಗೆ 10ಗಂಟೆಗೆ ಕಾರ್ಕಡದಲ್ಲಿ ಜಲಾವೃತವಾದ ಕೃಷಿ ಜಮೀನಿನ ಸಮೀಪದಲ್ಲೇ ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದೇವೆ. ಮುಂದಿನ ಹಂತದಲ್ಲಿ ಹೆಚ್ಚಿನ ಹೋರಾಟ ನಡೆಸಲಿದ್ದೇವೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಉಮೇಶ್ ಹೆಬ್ಬಾರ್, ಶ್ರೀನಿವಾಸ ಕಾರಂತ ಕಾರ್ಕಡ, ಶಿವರಾಮ ಕಾರಂತ್, ಪರಮೇಶ್ವರ ಭಟ್, ಕೇಶವ ನಾರಿ, ಚಂದ್ರ ಕೆ., ಸುಕೇಶ್, ರಮೇಶ್ ಮೆಂಡನ್ ಇದ್ದರು