ಬೈಂದೂರು: ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಎಲ್ಲಿಯೂ ನೀರು ನಿಲ್ಲಲು ಅವಕಾಶ ನೀಡಬಾರದು. ನಾವಿರುವ ಪರಿಸರದ ಸ್ವಚ್ಛತೆಗೆ ವಿಶೇಷ ಆಧ್ಯತೆ ನೀಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಹೇಳಿದರು.
ಅಮಾಸೆಬೈಲು ಚಾರಿಟಬಲ್ ಟ್ರಸ್ಟ್, ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘ, ಕರ್ನಾಟಕ ಬ್ಯಾಂಕ್, ಅಮಾಸೆಬೈಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಅಮಾಸೆಬೈಲು ಗ್ರಾಮ ಪಂಚಾಯತಿ ಹಾಗೂ ಕುಂದಾಪುರ ಕೋಟೇಶ್ವರದ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಗುರುವಾರ ಅಮಾಸೆಬೈಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ನಿರಂತರ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು. ಭಾರತೀಯ ವೈದ್ಯ ಪದ್ಧತಿಯ ಸಾಕಷ್ಟು ಮಹತ್ವ ಪಡೆದಿದ್ದು, ಎಲ್ಲ ಕಾಯಿಲೆಗಳಿಗೂ ಈ ಪದ್ಧತಿಯಲ್ಲಿ ಚಿಕಿತ್ಸೆ ಮತ್ತು ಔಷಧವಿದೆ. ಉತ್ತಮ ಆರೋಗ್ಯದ ಮೂಲಕ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದರು
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಆರೋಗ್ಯವೇ ಭಾಗ್ಯ ಎಂಬಂತೆ ಇಂದಿನ ಒತ್ತಡ ಮಯ ಬದುಕಿನಲ್ಲಿ ಎಲ್ಲರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯಕ. ಈ ನಿಟ್ಟಿನಲ್ಲಿ ಇಂತಹ ಶಿಬಿರಗಳು ಸಹಕಾರಿಯಾಗಲಿವೆ ಎಂದರು.
ಪ್ರಮುಖರಾದ ಅಶೋಕ್ ಕೊಡ್ಗಿ, ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮದ ಗಣ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.ಗ್ರಾಮದ ಅನೇಕರು ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಕೊಂಡು, ವೈದ್ಯರಿಂದ ಸಲಹೆ, ಸೂಚನೆ ಪಡೆದರು. ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೂ ಶಿಬಿರ ನಡೆದಿದೆ