ಬೈಂದೂರು : ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಉಪ್ಪುಂದದ ತಮ್ಮ ಕಾರ್ಯಕರ್ತ ಕಚೇರಿಯಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ, ಸಣ್ಣ ನೀರಾವರಿ ಇಲಾಖೆ, ವಾರಾಹಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಬೈಂದೂರು ಕ್ಷೇತ್ರದ ಅಭಿವೃದ್ಧಿ ಮತ್ತು ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದರು.
ಸಭೆಯಲ್ಲಿ ಅರಣ್ಯ ಇಲಾಖೆಯ ಸಂಬಂಧಪಟ್ಟಂತೆ ಕಾಡಿನಲ್ಲಿ ಬಹುಸಂಖ್ಯೆಯಲ್ಲಿ ವಾಸಿಸುತ್ತಿರುವ ಮಂಗಗಳಿಗೆ ಅರಣ್ಯ ಇಲಾಖೆಯ ವತಿಯಿಂದ ಮಂಕಿ ಪಾರ್ಕ್ ನಿರ್ಮಿಸುವಂತೆ, ಅರಣ್ಯದ ಒಳ ಪ್ರದೇಶದಲ್ಲಿಯೇ ಕಾಡು ಪ್ರಾಣಿಗಳಿಗೆ ಬೇಕಾದ ಆಹಾರ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಹಣ್ಣುಹಂಪಲುಗಳ ಗಿಡಗಳ ನೆಟ್ಟು ಬೆಳೆಸುವಂತೆ, ಡೀಮ್ಡ್ ಫಾರೆಸ್ಟ್ ಜಾಗಗಳನ್ನು ಆದಷ್ಟು ಬೇಗ ಜಂಟಿ ಸರ್ವೇ ಮಾಡುವಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಣ್ಣ ನೀರಾವರಿ ಇಲಾಖೆ ಸಂಬಂಧ ಪಟ್ಟಂತೆ ಬೈಂದೂರು ಕ್ಷೇತ್ರದಾದ್ಯಂತ ಇರುವ ಚೆಕ್ ಡ್ಯಾಮ್‌ಗಳನ್ನು ದುರಸ್ತಿ ಮಾಡುವಂತೆ, ಕೊಲ್ಲೂರಿನಲ್ಲಿ ಇರುವ ಪಿಯಾನೋ ಅಣೆಕಟ್ಟನ್ನು ಕೃಷಿಬಳಕೆ ಮತ್ತು ಪ್ರವಾಸೋದ್ಯಮ ಸ್ನೇಹಿಯಾಗಿಸಲು ಕರೆ ನೀಡಿದರು. ವಾರಾಹಿ ಏತ ನೀರಾವರಿ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಹಾಗೂ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರಗಳ ಸ್ಥಾಪಿಸಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು