ಮಂಗಳೂರು : ಶಾಂತಿಯುತ ಲೋಸಕಭಾ ಚುನಾವಣೆಗಾಗಿ ಚುನಾವಣಾ ಆಯೋಗದ ನಿರ್ದೇಶನದಂತೆ ನಿರಂತರ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದ ಮೂವರ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಆದೇಶ ಹೊರಡಿಸಿದ್ದಾರೆ. ಉಳ್ಳಾಲ ಕೋಟೆಪುರ ನಿವಾಸಿ ಮೊಹಮ್ಮದ್ ಕಬೀರ್ ಯಾನೆ ಚಬ್ಬಿ (31),
ಗುರುಪುರ ಮಠದಗುಡ್ಡೆ ನಿವಾಸಿ ನವಾಜ್ (30), ಶಕ್ತಿನಗರ ನಿವಾಸಿ ಜಯಪ್ರಶಾಂತ್ (30) ಗೂಂಡಾ ಕಾಯ್ದೆಗೆ ಒಳಪಟ್ಟವರು. ಈ ಪೈಕಿ ಮೊಹಮ್ಮದ್ ಕಬೀರ್ ವಿರುದ್ಧ 1 ಕೊಲೆ, 3 ಕೊಲೆಯತ್ನ, 6 ದರೋಡೆ, 3 ಹಲ್ಲೆ 1 ದೌರ್ಜನ್ಯ ಕೇಸು ಸೇರಿದಂತೆ ಒಟ್ಟು 14 ಕ್ರಿಮಿನಲ್ ಪ್ರಕರಣಗಳಿವೆ.
ನವಾಜ್ ವಿರುದ್ದ ಬಜಪೆ, ಕಾವೂರು, ಮಂಗಳೂರು ಗ್ರಾಮಾಂತರ, ಕದ್ರಿ, ಬರ್ಕೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1 ಕೊಲೆ, 1 ಕೊಲೆ ಯತ್ನ, 2 ಗಾಂಜಾ ಸೇವನೆ, 3 ಡ್ರಗ್ಸ್ ಮಾರಾಟ ಸೇರಿದಂತೆ ಒಟ್ಟು8 ಪ್ರಕರಣ ದಾಖಲಾಗಿದೆ.
ಜಯಪ್ರಕಾಶ್ ವಿರುದ್ಧ 3 ಕೋಮು ಗಲಭೆ, 1 ಕೊಲೆಯತ್ನ, 4 ನೈತಿಕ ಪೊಲೀಸ್‌ಗಿರಿ, ಹಲ್ಲೆ, ಕಾನೂನು ಬಾಹಿರ ಚಟುವಟಿಕೆ ಸೇರಿದಂತೆ 8 ಪ್ರಕರಣಗಳು ದಾಖಲಾಗಿವೆ. ಈ ಮೂವರೂ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ ಜಾಮೀನು ಮೇಲೆ ಬಿಡುಗಡೆಯಾದ ಬಳಿಕವೂ ಅಪರಾಧ ಚಟುವಟಿಕೆ ಹಾಗೂ ಸಾಮಾಜಿಕ ಶಾಂತಿ ಕದಡುವ ಕೃತ್ಯ ಮುಂದುವರಿಸುತ್ತಿದ್ದ ಹಿನ್ನೆಲೆಯಲ್ಲಿ ಗೂಂಡಾ ಕಾಯ್ದೆ ಜಾರಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ