ಕುಂದಾಪುರ : ಸರ್ಕಾರಿ ಪದವಿಪೂರ್ವ ಕಾಲೇಜು, ಕುಂದಾಪುರದಲ್ಲಿ 2010ನೇ ಇಸವಿಯ HEPS ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಹದಿನಾರು ವರ್ಷಗಳ ನಂತರ ಒಟ್ಟುಗೂಡಿದ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಗೌರವಿಸುವ ಮೂಲಕ ವಿಶೇಷ ಕ್ಷಣಕ್ಕೆ ಸಾಕ್ಷಿಯಾದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲರಾದ ಆರ್.ಬಿ. ನಾಯಕ್ ಅವರು, “ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇತ್ತೀಚೆಗೆ ಕಡಿಮೆಯಾಗುತ್ತಿರುವುದು ವಿಷಾದನೀಯ. ನೂರಾರು ವರ್ಷಗಳ ಇತಿಹಾಸವಿರುವ ಈ ಸಂಸ್ಥೆಯಲ್ಲಿ ಇಂತಹ ಸ್ನೇಹ ಸಮ್ಮಿಲನವನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳು ಮತ್ತೊಂದು ಇತಿಹಾಸ ನಿರ್ಮಿಸಿದ್ದಾರೆ” ಎಂದು ಹೇಳಿದರು. ಇದೇ ಸಂದರ್ಭದಲ್ಲಿ ತಮ್ಮ ವೃತ್ತಿ ಬದುಕಿನ ಅನುಭವಗಳನ್ನು ಹಂಚಿಕೊಂಡು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಪ್ರಾಂಶುಪಾಲರಾದ ರಾಮಕೃಷ್ಣ ಅವರು, ಸಾಮಾಜಿಕ ಜಾಲತಾಣಗಳ ಸಹಾಯದಿಂದ ಇಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಬಹುದು ಎಂಬುದನ್ನು 2010ರ ಬ್ಯಾಚ್ ಸಾಬೀತುಪಡಿಸಿದೆ ಎಂದು ಹೇಳಿದರು. ಕಾರ್ಯಕ್ರಮದ ಆಯೋಜನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಇತಿಹಾಸ ಉಪನ್ಯಾಸಕರಾದ ಪೂರ್ಣಿಮಾ, ಸಮಾಜಶಾಸ್ತ್ರ ಉಪನ್ಯಾಸಕರಾದ ಪ್ರಕಾಶ್ ಶೆಟ್ಟಿ, ಆಂಗ್ಲಭಾಷಾ ಉಪನ್ಯಾಸಕರಾದ ರಾಜೀವ್ ನಾಯಕ್ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕರಾದ ಭುಜಂಗ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ರೂಪುರೇಷೆಯನ್ನು ಹಳೆಯ ವಿದ್ಯಾರ್ಥಿಗಳಾದ ಶ್ರೀಮತಿ ಆಶ್ರಿತಾ , ಕಾರ್ತಿಕ್ ಮತ್ತು ಪ್ರವೀಣ್ ರೂಪಿಸಿದರು. ಶ್ರೀಮತಿ ಪ್ರವೀಣಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಶುಭಾ ಸ್ವಾಗತ ಕೋರಿದರು. ಕಾರ್ತಿಕ್ ಸೌಕೂರು ವಂದನಾರ್ಪಣೆ ಸಲ್ಲಿಸಿದರು.
ಸ್ನೇಹಿತರ ಮಿಲನ ಹಾಗೂ ಗುರುಗಳಿಗೆ ಗೌರವ ಸಲ್ಲಿಸುವ ಮೂಲಕ ಕಾರ್ಯಕ್ರಮ ಸಾರ್ಥಕತೆಯನ್ನು ಪಡೆದಿತು.

