Home » ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ, ಜನ ಸಾಮಾನ್ಯರ ಗೋಳು ಕೇಳುವವರಿಲ್ಲ : ಕುತ್ಯಾರು ನವೀನ್ ಶೆಟ್ಟಿ
 

ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ, ಜನ ಸಾಮಾನ್ಯರ ಗೋಳು ಕೇಳುವವರಿಲ್ಲ : ಕುತ್ಯಾರು ನವೀನ್ ಶೆಟ್ಟಿ

by Kundapur Xpress
Spread the love

ಉಡುಪಿ : ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ದಿಕ್ಕು ದೆಸೆ ಇಲ್ಲದ ಆಡಳಿತ ವೈಫಲ್ಯದಿಂದ ಜನ ಸಾಮಾನ್ಯರ ಗೋಳು ಕೇಳುವವರಿಲ್ಲದಂತಾಗಿದೆ. ಉಡುಪಿ ಜಿಲ್ಲೆಯ ಅಗತ್ಯ ಮೂಲಭೂತ ಸೌಕರ್ಯಗಳಿಗೆ ತುರ್ತು ಸ್ಪಂದನೆ ನೀಡಬೇಕು ಎಂದು ಜಿಲ್ಲಾ ಬಿಜೆಪಿ ರಾಜ್ಯ ಸರಕಾರವನ್ನು ಆಗ್ರಹಿಸುತ್ತದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಹೇಳಿದರು.

ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಉಪಸ್ಥಿತಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಉಡುಪಿ ಜಿಲ್ಲಾಸ್ಪತ್ರೆ ಕಾಮಗಾರಿ ಪೂರ್ಣಗೊಳಿಸಿ, ಲೋಕಾರ್ಪಣೆಗೊಳಿಸಿ 

ಉಡುಪಿಯ ಜಿಲ್ಲಾಸ್ಪತ್ರೆ ನಿರ್ಮಾಣ ಕಾಮಗಾರಿಯನ್ನು ಡಿಸೆಂಬರ್ 2021ರಲ್ಲಿ ಪ್ರಾರಂಭಿಸಲಾಗಿದ್ದು, ನಿರ್ಮಾಣ ಕಾಮಗಾರಿಯು ಮೂರು ವರ್ಷಗಳ ಹಿಂದೆಯೇ ಶೇ.90ರಷ್ಟು ಪೂರ್ಣಗೊಂಡಿದ್ದು, ಬಾಕಿ ಉಳಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ ಶೀಘ್ರ ಲೋಕಾರ್ಪಣೆಗೊಳಿಸುವ ಮೂಲಕ ಜನರ ಸೇವೆಗೆ ಲಭಿಸುವಂತಾಗಲು ಸರಕಾರ ಇನ್ನೂ ಇಚ್ಛಾಶಕ್ತಿ ತೋರಿಸಿರುವುದಿಲ್ಲ. ಜಿಲ್ಲಾಸ್ಪತ್ರೆ ಕೇವಲ 120 ಹಾಸಿಗೆಗಳ ತಾಲೂಕು ಮಟ್ಟದ ಆಸ್ಪತ್ರೆಯಾಗಿ ಇನ್ನೂ ಕಾರ್ಯಾಚರಿಸುತ್ತಿದೆ. ಬಡ ರೋಗಿಗಳು ಹಾಸಿಗೆ, ಐ.ಸಿ.ಯು. ಲಭ್ಯವಾಗದೇ ನೆರೆಯ ಜಿಲ್ಲೆಯಾದ ದಕ್ಷಿಣ ಕನ್ನಡದ ವೆನ್‌ಲಾಕ್ ಆಸ್ಪತ್ರೆಗೆ ಹೋಗಿ, ಅಲ್ಲಿಯೂ ಸರಿಯಾದ ಬೆಡ್ ವ್ಯವಸ್ಥೆ ದೊರಕದೇ ಚಿಕಿತ್ಸೆಗೆ ಅಲೆದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ದಿನಂಪ್ರತಿ ಬಡ ರೋಗಿಗಳು ಐ.ಸಿ.ಯು. ಬೆಡ್‌ಗಾಗಿ ಹೋರಾಟ ನಡೆಸುವ ಶೋಚನೀಯ ಸ್ಥಿತಿ ಉಂಟಾಗಿದ್ದು, ಆ್ಯಂಬುಲೆನ್ಸ್‌ನಲ್ಲಿಯೇ ಪ್ರಾಣ ಬಿಡುವಂತಹ ಶೋಚನಿಯ ಪರಿಸ್ಥಿತಿ ಉದ್ಭವಿಸಿದೆ. ಈ ಬಗ್ಗೆ ಸಾಕಷ್ಟು ಮನವಿಗಳನ್ನು ನೀಡಿ, ಪ್ರತಿಭಟನೆ ಕೈಗೊಂಡರೂ ರಾಜ್ಯ ಸರಕಾರ ಯಾವುದೇ ಕ್ರಮ ವಹಿಸದೆ ನಿಷ್ಕ್ರಿಯವಾಗಿದೆ.

ರಾಜ್ಯ ಸರಕಾರ ಉಡುಪಿ ಜಿಲ್ಲಾಸ್ಪತ್ರೆ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸುವ ಜೊತೆಗೆ ಆಸ್ಪತ್ರೆಗೆ ಬೇಕಾದ ಉಪಕರಣಗಳಿಗೆ ಸೂಕ್ತ ಅನುದಾನವನ್ನು ಒದಗಿಸಿ, ವೈದ್ಯರು, ಸಿಬ್ಬಂದಿಗಳ ಹುದ್ದೆಗಳನ್ನು ಭರ್ತಿ ಮಾಡಲು ತಕ್ಷಣ ಕ್ರಮ ಕೈಗೊಂಡು ಉಡುಪಿ ಜಿಲ್ಲೆಯ ವೈದ್ಯಕೀಯ ವ್ಯವಸ್ಥೆಯನ್ನು ಬಲಪಡಿಸುವಂತೆ ಜಿಲ್ಲೆಯ ಜನತೆಯ ಪರವಾಗಿ ಆಗ್ರಹಿಸುತ್ತಿದ್ದೇವೆ. ತಪ್ಪಿದ್ದಲ್ಲಿ ಜಿಲ್ಲಾವ್ಯಾಪಿ ಬೃಹತ್ ಉಗ್ರ ಪ್ರತಿಭಟನೆಯನ್ನು ನಡೆಸುವುದಾಗಿ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ಬಡವರ ಮಾಸಾಶನ ನಿಲ್ಲಿಸಬೇಡಿ – ಸಾಮಾಜಿಕ ಭದ್ರತಾ ಯೋಜನೆಗಳ ಮಾಸಾಶನದ ಆದಾಯ ಮಿತಿ ಹೆಚ್ಚಿಸಲು ಉಡುಪಿ ಜಿಲ್ಲಾ ಬಿ.ಜೆ.ಪಿ. ಆಗ್ರಹ:

ಸಾಮಾಜಿಕ ಭದ್ರತಾ ಯೋಜನೆಗಳಡಿ ನೀಡಲಾಗುತ್ತಿರುವ ಮಾಸಾಶನಕ್ಕೆ ಕುಟುಂಬದ ವಾರ್ಷಿಕ ಆದಾಯ ಮಿತಿ ಕೇವಲ ರೂ.32,000 ಎಂದು ನಿಗದಿಪಡಿಸಿರುವುದು ಸಂಪೂರ್ಣ ಅವೈಜ್ಞಾನಿಕ ಹಾಗೂ ಬಡವರ ವಿರೋಧಿ ನಿರ್ಧಾರವಾಗಿದ್ದು, ಇದರಿಂದ ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದ ಲಕ್ಷಾಂತರ ಅರ್ಹ ಫಲಾನುಭವಿಗಳು ಯೋಜನೆಯ ಲಾಭದಿಂದ ವಂಚಿತರಾಗುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಸುಮಾರು 50,000 ಜನರು ಮತ್ತು ರಾಜ್ಯದಲ್ಲಿ 24 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಪಿಂಚಣಿ ಕಳೆದುಕೊಳ್ಳುವ ಭೀತಿಯಲ್ಲಿ ಬದುಕುತ್ತಿರುವುದು ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಸ್ಪಷ್ಟ ಉದಾಹರಣೆಯಾಗಿದೆ. ಸರ್ಕಾರವೇ ನಿಗದಿಪಡಿಸಿರುವ ಕನಿಷ್ಠ ದಿನಗೂಲಿ ರೂ.370 ಇರುವ ಪರಿಸ್ಥಿತಿಯಲ್ಲಿ ಈ ಹಳೆಯ ಆದಾಯ ಮಿತಿಯನ್ನು ಮುಂದುವರಿಸುವುದು ಬಡ ವಿಧವೆಯರು, ಹಿರಿಯ ನಾಗರಿಕರು ಮತ್ತು ದುರ್ಬಲ ವರ್ಗಗಳ ಮೇಲಿನ ಅನ್ಯಾಯವಾಗಿದ್ದು, ತಕ್ಷಣವೇ ಈ ಮಿತಿಯನ್ನು ರೂ.32,000 ದಿಂದ ರೂ.1,20,000ಕ್ಕೆ ಹೆಚ್ಚಿಸಬೇಕು. ಆದಾಯ ಮಿತಿ ಹೆಚ್ಚಿಸುವವರೆಗೆ ನಡೆಯುತ್ತಿರುವ ಪಿಂಚಣಿ ಪರಿಶೀಲನೆ ಮತ್ತು ರದ್ದತಿ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಉಡುಪಿ ಜಿಲ್ಲಾ ಬಿಜೆಪಿ ಒತ್ತಾಯ ಪೂರ್ವಕವಾಗಿ ಆಗ್ರಹಿಸುತ್ತದೆ. ರಾಜ್ಯ ಸರ್ಕಾರ ಈ ಬೇಡಿಕೆಯನ್ನು ತಕ್ಷಣ ಈಡೇರಿಸದಿದ್ದರೆ ರಾಜ್ಯವ್ಯಾಪಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಕಠಿಣ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಕುತ್ಯಾರು ತಿಳಿಸಿದರು.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸಮಸ್ಯೆಗಳು :

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕಳೆದ ಮೂರು ವರ್ಷಗಳಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕೊರತೆಯ ನೆಪವೊಡ್ಡಿ ಜನ ಸಾಮಾನ್ಯರು ಸೇವೆ ಪಡೆಯಲು ಅಸಹಾಯಕರಾಗಿ ತಿಂಗಳು ಗಟ್ಟಲೆ ಅಲೆದಾಡುವ ಪರಿಸ್ಥಿತಿ ನಿತ್ಯ ನಿರಂತರವಾಗಿದೆ. ಸರಕಾರಕ್ಕೆ ಎಷ್ಟೇ ಮನವಿ ಸಲ್ಲಿಸಿದರೂ ಯಾವುದೇ ಪರಿಹಾರ ಕಂಡು ಬಂದಿಲ್ಲ.

ಬಡ ನಿವೇಶನ ರಹಿತರಿಗೆ ಜಿಲ್ಲಾಧಿಕಾರಿಗಳು ಹಕ್ಕು ಪತ್ರ ನೀಡಿ ನಿವೇಶನ ಒದಗಿಸಿದ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಲು ಪರವಾನಿಗೆ ಲಭಿಸುತ್ತಿಲ್ಲ. 94ಸಿಸಿ ಕಾನೂನಿನಡಿ ಸರಕಾರದಿಂದ ಒಂದೆರಡು ಸೆಂಟ್ಸ್ ಭೂಮಿ ಪಡೆದ ಬಡ ಕುಟುಂಬಗಳಿಗೂ ಮನೆ ನಿರ್ಮಾಣದ ಪರವಾನಿಗೆ ಲಭಿಸುತ್ತಿಲ್ಲ.

ಪ್ರಸ್ತುತ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನೂರಾರು ಕಡತಗಳು ಬಾಕಿ ಉಳಿದಿರುವುದಲ್ಲದೇ, ಅವೈಜ್ಞಾನಿಕ ಹಾಗೂ ಅವಾಸ್ತವ ಕಾನೂನಿನ ನೆಪವೊಡ್ಡಿ ಸಾವಿರಾರು ಅರ್ಜಿಗಳಿಗೆ ಹಿಂಬರಹ ನೀಡಿ, ಕಡತ ಮುಕ್ತಾಯಗೊಳಿಸುವ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆಯಲಾಗಿದೆ.

ಕಂದಾಯ ಇಲಾಖೆಯಿಂದ ಹಕ್ಕು ಪತ್ರಗಳ ಮಂಜೂರಾತಿಗೆ ಯಾವುದೇ ಸ್ಪಂದನೆಯಿಲ್ಲ :

ದಾಖಲೆಗಳ ಕೊರತೆ, ಡೀಮ್ಡ್ ಫಾರೆಸ್ಟ್, ಕುಮ್ಕಿ ಮತ್ತಿತರ ಕಾರಣಗಳನ್ನು ನೀಡಿ ಹಕ್ಕು ಪತ್ರಗಳನ್ನು ನೀಡುವ ಕಾರ್ಯಕ್ರಮಗಳನ್ನು ರಾಜ್ಯ ಸರಕಾರ ಸ್ಥಗಿತಗೊಳಿಸಿ, ಬಡ ಕುಟುಂಬಗಳನ್ನು ನಡು ನೀರಿನಲ್ಲಿ ಬಿಟ್ಟಂತಾಗಿದೆ.

ಕಳೆದ 3 ವರ್ಷಗಳಿಂದ ಒಂದೇ ಒಂದು ಪಡಿತರ ಕಾರ್ಡು ವಿತರಣೆಯಾಗಿಲ್ಲ. ಯಾವುದೇ ನಿವೇಶನಗಳ ವಿತರಣೆ ಇಲ್ಲ. ಕಾನೂನಿನ ತೊಡಕಿನಿಂದ ಗೃಹ ನಿರ್ಮಾಣಕ್ಕೆ ತಡೆಯಾಗಿದೆ. ವಾಜಪೇಯಿ ವಸತಿ, ಅಂಬೇಡ್ಕರ್ ವಸತಿ, ಬಸವ ವಸತಿ ಯೋಜನೆಗಳಡಿಯಲ್ಲಿ ಉಡುಪಿ ಜಿಲ್ಲೆಗೆ ಯಾವುದೇ ವಸತಿ ಸೌಲಭ್ಯ ನೀಡದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಜನವಿರೋಧಿ ನಡೆ ಖಂಡನೀಯ.

ಈ ಎಲ್ಲಾ ಜ್ವಲಂತ ಸಮಸ್ಯೆಗಳಿಗೆ ಆದ್ಯತೆ ಮೇರೆಗೆ ತುರ್ತು ಪರಿಹಾರ ದೊರೆಯದೇ ಇದ್ದಲ್ಲಿ ಜಿಲ್ಲೆಯ ಸಂಸದರು, ಶಾಸಕರು, ಜನಪ್ರತಿನಿಧಿಗಳು ಹಾಗೂ ಪಕ್ಷದ ಎಲ್ಲಾ ಸ್ತರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸಿ ರಾಜ್ಯ ಸರಕಾರದ ವಿರುದ್ಧ ತೀವ್ರ ಸಂಘಟಿತ ಹೋರಾಟ ರೂಪಿಸಲಾಗುವುದು ರಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಮತ್ತು ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ದಿವಾಕರ ಶೆಟ್ಟಿ ಕಲ್ಯಾ, ಜಿಲ್ಲಾ ಕಾರ್ಯದರ್ಶಿಗಳಾದ ಶಿವಕುಮಾರ್ ಅಂಬಲಪಾಡಿ ಮತ್ತು ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಉಪಸ್ಥಿತರಿದ್ದರು.

 

Related Articles

error: Content is protected !!