ನವದೆಹಲಿ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೇಶದ ಜನತೆಗೆ ‘5 ನ್ಯಾಯ 25 ಗ್ಯಾರಂಟಿ’ (ಪಂಚ ನ್ಯಾಯ ಪಚೀಸ್ ಗ್ಯಾರಂಟಿ) ಘೋಷಣೆ ಮಾಡಿರುವ ಕಾಂಗ್ರೆಸ್, ಆ ಭರವಸೆಯನ್ನು ದೇಶದ ಎಲ್ಲ ಮನೆಗೂ ಮುಟ್ಟಿಸಲು ‘ಮನೆ ಮನೆಗೆ ಗ್ಯಾರಂಟಿ’ (ಘರ್ ಘರ್ ಗ್ಯಾರಂಟಿ) ಅಭಿಯಾನಕ್ಕೆ ಚಾಲನೆ ನೀಡಿದೆ.
ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಈ ಅಭಿಯಾನವನ್ನು ಉದ್ಘಾಟಿಸಿ, ಜನರಿಗೆ ‘ಗ್ಯಾರಂಟಿಕಾರ್ಡ್’ಗಳನ್ನು ಹಂಚಿದರು. ಈ ವೇಳೆ ಮಾತನಾಡಿದ ಅವರು, 5 ನ್ಯಾಯ, 25 ಗ್ಯಾರಂಟಿಗಳನ್ನು ಜನರಿಗೆ ಮುಟ್ಟಿಸಲು ಗ್ಯಾರಂಟಿ ಕಾರ್ಡ್‌ಗಳನ್ನು ವಿತರಣೆ ಮಾಡುತ್ತಿದ್ದೇವೆ. ದೇಶದ ಎಲ್ಲ 8 ಕೋಟಿ ಮನೆಗಳಿಗೂ ಇದನ್ನು ತಲುಪಿಸುತ್ತೇವೆ. ನಮ್ಮ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಎಂದು ತಿಳಿಸುತ್ತೇವೆ ಎಂದರು.