ಉಡುಪಿ : ಬಣ್ಣ ತೆಗೆಯುವಾಗಲೇ ಹೃದಯಾಘಾತವಾಗಿ ಹಿರಿಯ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು (59ವರ್ಷ) ನಿಧನವಾಗಿರುವ ಘಟನೆ ಉಡುಪಿಯ ಕೋಟ ಗಾಂಧಿ ಮೈದಾನದಲ್ಲಿ ನಡೆದಿದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಕಲಾವಿದ ಗಂಗಾಧರ ಪುತ್ತೂರು ಕೋಟ ಗಾಂಧಿ ಮೈದಾನದಲ್ಲಿ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಕುಕ್ಕಿತ್ತಾಯನ ವೇಷ ನಿರ್ವಹಿಸಿ, ಚೌಕಿಗೆ ಮರಳಿ ಕಿರೀಟ ಆಭರಣಗಳನ್ನು ತೆಗೆದಿಟ್ಟು ಮುಖದ ಬಣ್ಣ ತೆಗೆಯುತ್ತಿದ್ದ ಹಾಗೆ, ರಾತ್ರಿ ಸುಮಾರು 12.25ಕ್ಕೆ ಚೌಕಿಯಲ್ಲಿ ಮಂಗಳ ಆಗುವ ವೇಳೆಗೇ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ 42 ವರ್ಷಕ್ಕೂ ಅಧಿಕ ಕಾಲ ನಿರಂತರ ಅವರು ಕಲಾವಿದನಾಗಿ ಸೇವೆ ಸಲ್ಲಿಸಿದ್ದರು.
ಪುತ್ತೂರು ತಾಲೂಕು ಕೋಡಿಂಬಾಡಿ ಸಮೀಪ ಸೇಡಿಯಾವು ಎಂಬಲ್ಲಿ ಜನಿಸಿದ ಅವರು, ಏಳನೇ ತರಗತಿವರೆಗೆ ಓದಿ ಕುಂಬಳೆ ಶ್ರೀಧರ ರಾಯರ ಮಾರ್ಗದರ್ಶನದಲ್ಲಿ ಶ್ರೀ ಧರ್ಮಸ್ಥಳ ಯಕ್ಷಗಾನ ಕಲಿಕಾ ಕೇಂದ್ರಕ್ಕೆ ಸೇರಿದರು. ಅಲ್ಲಿ ಹಿರಿಯರಾದ ಗೋವಿಂದ ಭಟ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ಹೆಜ್ಜೆಗಾರಿಕೆಯನ್ನು ಕಲಿತು, ಶ್ರೀ ಧರ್ಮಸ್ಥಳ ಮೇಳಕ್ಕೆ ಬಾಲ ಕಲಾವಿದನಾಗಿ ಸೇರ್ಪಡೆಯಾದರು. ಹಂತ ಹಂತವಾಗಿ, ಬೆಳೆದು ಬಂದ ಅವರು, 42 ವರ್ಷಕ್ಕೂ ಅಧಿಕ ಕಾಲ ನಿರಂತರ ಕಲಾವಿದನಾಗಿ ಸೇವೆ ಸಲ್ಲಿಸಿದ್ದರು.