ಉಡುಪಿ : ವಿಧಾನ ಪರಿಷತ್ತಿನ ನೈಋತ್ಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿಯ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯವಾಗಿ ಸ್ಪರ್ಧಿಸುವುದಾಗಿ ಮಾಜಿ ಶಾಸಕ ಕೆ. ರಘುಪತಿ ಭಟ್ ಘೋಷಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಮಗೆ ಹೇಳದೆ ಪಕ್ಷದ ಟಿಕೆಟ್ ತಪ್ಪಿಸಲಾಗಿತ್ತು. ಆಗ ತಾನು ರಾಜಕೀಯ ನಿವೃತ್ತಿಗೆ ಮುಂದಾದಾಗ ಸಂಘದ ಮತ್ತು ಪಕ್ಷದ ಹಿರಿಯರು ವಿಧಾನ ಪರಿಷತ್ ಚುನಾವಣೆಯ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಶಿವಮೊಗ್ಗ ಧನಂಜಯ ಸರ್ಜಿ ಅವರಿಗೆ ನೀಡಿದ್ದಾರೆ. ಪಕ್ಷದ ಈ ನಿರ್ಧಾರದಿಂದ ತನಗೆ ನೋವಾಗಿದೆ. ಆದ್ದರಿಂದ ಪಕ್ಷೇತರನಾಗಿ ಸ್ಪರ್ಧಿಸುವ ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾನು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಜಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ಸುನಿಲ್ ಕುಮಾರ್ ಮುಂತಾದವರಿಗೂ ತನ್ನ ಸ್ಪರ್ಧೆಯ ಆಪೇಕ್ಷೆಯನ್ನು ತಿಳಿಸಿದ್ದೆ, ಅವರೆಲ್ಲರೂ ಒಪ್ಪಿದ್ದರು. ಆದರೆ ಈಗ ಟಿಕೆಟ್ ಶಿವಮೊಗ್ಗದ ಧನಂಜಯ್ ಸರ್ಜೆ ಅವರಿಗೆ ನೀಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಾತಿ, ಹಣ ಬಲದ ಮೇಲೆ ಟಿಕೆಟ್
ತನಗೆ ಟಿಕೆಟ್ ನೀಡದಿರುವುದಕ್ಕೆ ಕಾರಣವನ್ನು ತನ್ನನ್ನು ಕರೆದು ಮನವರಿಕೆ ಮಾಡಬೇಕಾಗಿತ್ತು, ಶಿವಮೊಗ್ಗ ಜಿಲ್ಲೆಗೆ ನೀಡುವ ಅಥವಾ ಲಿಂಗಾಯತರಿಗೆ ನೀಡುವ ಅನಿವಾರ್ಯತೆ ಇದ್ದಿದ್ದರೇ ಅದನ್ನಾದರೂ ಹೇಳಬೇಕಾಗಿತ್ತು. ಅಥವಾ ಪಕ್ಷದ ಹಿರಿಯ ಕಾರ್ಯಕರ್ತರಿಗೆ ನೀಡಿದ್ದರೂ ಬೇಸರ ಇರಲಿಲ್ಲ. ಮೊನ್ನೆಮೊನ್ನೆ ಪಕ್ಷಕ್ಕೆ ಬಂದ ಧನಂಜಯ್ ಸರ್ಜಿ ಅವರು ಅವರ ಶಿವಮೊಗ್ಗದಲ್ಲಿ ಸಂಘದ ವಿರುದ್ಧ ಕೆಲಸ ಮಾಡಿದವರು. ಜಾತಿ, ಹಣ ಬಲದ ಮೇಲೆ ಅವರಿಗೆ ಟಿಕೆಟ್ ನೀಡಲಾಗಿದೆ ಎಂದವರು ಆರೋಪಿಸಿದರು. ಇದೇನೂ ದೇಶದ ಅಥವಾ ರಾಜ್ಯದ ಸರ್ಕಾರ ರಚಿಸುವ ಚುನಾವಣೆ ಅಲ್ಲ, ಆದ್ದರಿಂದ ನಾನು ಪಕ್ಷದ ವಿರುದ್ಧ ಸ್ಪರ್ಧಿಸುತ್ತಿಲ್ಲ, ನಾನು ಪಕ್ಷೇತರನಾಗಿ ಗೆದ್ದರೂ ಬಿಜೆಪಿಯ ವಿಧಾನ ಪರಿಷತ್ ಸದಸ್ಯನಾಗಿಯೇ ಹೋಗುತ್ತೇನೆ ಎಂದರು. ನನ್ನ ಮೇಲೆ ಪಕ್ಷ ಶಿಸ್ತು ಕ್ರಮ ಕೈಗೊಳ್ಳಬಹುದು, ಉಚ್ಚಾಟನೆ ಮಾಡಬಹುದು ಎಂದು ನನಗೆ ಗೊತ್ತಿದೆ. ಆದರೂ ನಾನು ಪಕ್ಷದ ಕಾರ್ಯಕರ್ತರ ಪ್ರತಿನಿಧಿಯಾಗಿ ಸ್ಪರ್ಧಿಸುತ್ತೇನೆ ಎಂದವರು ಹೇಳಿದರು.