ಉಡುಪಿ : ನಾವು ಗೆಲ್ಲುವುದಲ್ಲ ಕಾರ್ಯಕರ್ತರು ನಮ್ಮನ್ನು ಗೆಲ್ಲಿಸಬೇಕು. ನಾವು ವಿಷಯಧಾರಿತ ಚರ್ಚೆಗಳಿಗೆ ಹೋಗುವುದಿಲ್ಲ, ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಉಡುಪಿ-ಚಿಕ್ಕಮಗಳೂರು ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿದರು. ಅವರು ಬುಧವಾರ ನಾಮಪತ್ರ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾಮಪತ್ರ ಸಲ್ಲಿಸಿದ್ದೇನೆ, ಇನ್ನು ಚುನಾವಣಾ ಕೆಲಸ ಮಾಡುವುದು ಬಾಕಿ, ನಾನು ಏನು ಕೆಲಸ ಮಾಡುತ್ತೇನೆ. ಯೋಜನೆಗಳು ಏನು ಎಂದು ಹೇಳುವುದಕ್ಕೆ ಇದು ಕಾಲವಲ್ಲ, ನಾನು 20 ತಿಂಗಳು ಸಂಸದನಾಗಿ ಕೆಲಸ ಮಾಡಿದ್ದು ಮಾತ್ರವಲ್ಲ ಸೋತಾಗಲು ಕೆಲಸ ಮಾಡಿದ್ದೇನೆ. ಪ್ರತಿ ಪಂಚಾಯಿತಿಗೂ ಭೇಟಿ ಕೊಟ್ಟಿದ್ದೇನೆ. ಪಂಚಾಯಿತಿಗಳ ಸಮಸ್ಯೆ ನನಗೆ ಅರ್ಥವಾಗುತ್ತದೆ. ಸಮಸ್ಯೆಗಳಿಗೆ ಸ್ಪಂದಿಸಲು ಅವಕಾಶಬೇಕು ಅಷ್ಟೆ ಎಂದವರು ಹೇಳಿದರು.
ಹೊಸದಾಗಿ ಜನರ ಸಂಪರ್ಕ ಮಾಡಿಕೊಳ್ಳಬೇಕೆಂದಿಲ್ಲ. ನಾನು ಜನರ ಸಂಪರ್ಕದಲ್ಲೇ ಇದ್ದೇನೆ. ಮಲೆನಾಡು, ಕರಾವಳಿ ಬಯಲು ಸೀಮೆಯ ಸಮಸ್ಯೆಗಳನ್ನು ನಾನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ ಎಂದ ಹೆಗ್ಡೆ, ಎರಡು ಜಿಲ್ಲೆಯ ಅಧ್ಯಕ್ಷರು ಪದಾಧಿಕಾರಿಗಳಲ್ಲಿ ಕಾರ್ಯಕ್ರಮ ಹಾಕಿಕೊಳ್ಳಲು ಹೇಳಿದ್ದೇನೆ. ಅವರು ಸೂಚಿಸಿದಂತೆ ತಿರುಗಾಟ ಮಾಡುತ್ತೇನೆ ಎಂದರು.