ಬೈಂದೂರು : ಕ್ಷೇತ್ರದ ಅನೇಕ ಕಡೆಗಳಲ್ಲಿ ಜಲಜೀವನ್ ಮಿಷನ್(ಜೆಜೆಎಂ) ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಜೆಜೆಎಂ ಕಾಮಗಾರಿಗಳನ್ನು ಶೀಘ್ರವಾಗಿ ಪೂರೈಸಲು ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಸೂಚಿಸಿದರು.
ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆ ಹಾಗೂ ರಾಷ್ಟೀಯ ಹೆದ್ದಾರಿ ಸಮಸ್ಯೆ ಗಳ ಕುರಿತು ಗ್ರಾಮ ಪಂಚಾಯತ್ ಅಧ್ಯಕ್ಷರು, ಪಿಡಿಓ, ಹಾಗೂ ಜೆಜೆಎಂ ಹಾಗೂ ಹೆದ್ದಾರಿ ಇಲಾಖಾ ಅಧಿಕಾರಿಗಳ ಜೊತೆಗೆ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣ ಸಭೆ ನಡೆಸಿ ಸೂಚನೆ ನೀಡಿದರು
ಜೆಜೆಎಂ ಕೇಂದ್ರ ಸರ್ಕಾರದ ಮಹತ್ವಪೂರ್ಣ ಯೋಜನೆಯಾಗಿದ್ದು ಎಲ್ಲ ಮನೆಗಳಿಗೂ ನಲ್ಲಿ ಮೂಲಕ ನೀರು ಪೂರೈಸುವ ಸಂಕಲ್ಪ ಇದರಲ್ಲಿದೆ. ಹೀಗಾಗಿ ಅಧಿಕಾರಿಗಳು ಯಾವುದೇ ವಿಳಂಬ ಇಲ್ಲದೆ ಜೆಜೆಎಂ ಕಾಮಗಾರಿಗಳನ್ನು ಪೂರ್ಣಗೊಳಿಸಿ ಆದಷ್ಟು ಬೇಗ ಪ್ರತಿ ಮನೆಗೆ ನಲ್ಲಿ ಮೂಲಕ ನೀರು ಪೂರೈಕೆ ಆಗುವಂತೆ ನೋಡಿಕೊಳ್ಳಬೇಕು. ಬಹುತೇಕ ಕಡೆಗಳಲ್ಲಿ ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡಿದ್ದು ಓವರ್ ಹೆಡ್ ಟ್ಯಾಂಕ್ ಗೆ ಸಂಪರ್ಕದಲ್ಲಿರುವ ಪ್ರಕ್ರಿಯೆ ಬಾಕಿ ಇರುತ್ತದೆ. ಅದನ್ನು ಅತಿಶೀಘ್ರದಲ್ಲಿ ಪೂರೈಸಬೇಕು ಎಂದು ಸೂಚಿಸಿದರು.
ಹೆದ್ದಾರಿ ಸುರಕ್ಷತೆಗೆ ಒತ್ತು
ಕ್ಷೇತ್ರದ ಮರವಂತೆ, ನಾವುಂದ, ಕಿರಿಮಂಜೇಶ್ವರ, ಕಂಬದಕೋಣೆ, ಉಪ್ಪುಂದ, ಶೀರೂರು ಹೀಗೆ ಕೆಲವು ಗ್ರಾಮ ಪಂಚಾಯಿತಿಗಳ ಮೂಲಕ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತದೆ. ಮಳೆಗಾಲದಲ್ಲಿ ರಾ.ಹೆ. ಹಲವು ಸಮಸ್ಯೆಗಳು ಉದ್ಭವವಾಗುತ್ತವೆ. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು