ಕುಂದಾಪುರ : ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಾನಿಗೊಳಗಾದ ತಾಲೂಕಿನ ಹೊಂಬಾಡಿ-ಮಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಯಡಾಡಿ ಮತ್ಯಾಡಿ ಗ್ರಾಮದ ಗುಡ್ಡಟ್ಟುವಿಗೆ ಗುರುವಾರ ಇಲ್ಲಿನ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ರಾಜು ಎನ್ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶೆ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಮಂಜುಳ ಬಿ ಅವರು ಭೇಟಿ ನೀಡಿ ಹಾನಿಯ ಪರಿಶೀಲನೆ ನಡೆಸಿದರು.
ಮಳೆಯಿಂದ ಹಾನಿಗೊಳಗಾದ ಗುಡ್ಡಟ್ಟುವಿನ ದೇವಿ ಸೀತಾರಾಮ ಆಚಾರ್, ನಾಗರಾಜ್, ಬಾಬು ರಾಯ್, ತಾರಾ ಆಚಾರ್ತಿ ಅವರ ಮನೆಗಳಿಗೆ ಭೇಟಿ ನೀಡಿದ ನ್ಯಾಯಾಧೀಶರುಗಳು, ಸಂತೃಸ್ತರಿಗೆ ಊಟೋಪಚಾರದ ವ್ಯವಸ್ಥೆಗೆ ಸೂಚಿಸಿದರು. ರಾತ್ರಿಯೂ ಮಳೆ ಮುಂದುವರೆಯುವ ಸಾಧ್ಯತೆಗಳಿರುವುದರಿಂದ, ಸ್ಥಳೀಯ ಗ್ರಾಮ ಪಂಚಾಯತ್ ನವರು ಸೂಚಿಸುವ ವಸತಿ ವ್ಯವಸ್ಥೆಗೆ ತೆರಳುವಂತೆ ಸಲಹೆ ನೀಡಿದರು. ಮಳೆ ಹಾಗೂ ನೆರೆ ನೀರು ಸರಾಗವಾಗಿ ಹರಿಯಲು ಸೂಕ್ತ ವ್ಯವಸ್ಥೆ ಮಾಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.
ತಹಶೀಲ್ದಾರ್ ಹೆಚ್.ಎಸ್.ಶೋಭಾಲಕ್ಷ್ಮೀ, ಉಪ ತಹಶೀಲ್ದಾರ್ ವಿನಯ್, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಹಂದಟ್ಟು ಪ್ರಮೋದ್ ಹಂದೆ, ಪ್ರಧಾನ ಕಾರ್ಯದರ್ಶಿ ಗಿಳಿಯಾರು ಪ್ರಕಾಶ್ಚಂದ್ರ ಶೆಟ್ಟಿ, ಕಂದಾಯ ನಿರೀಕ್ಷಕ ದಿನೇಶ್, ಗ್ರಾಮ ಕರಣಿಗ ವಿಶ್ವನಾಥ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ, ಅಭಿವೃದ್ಧಿ ಅಧಿಕಾರಿ ಚಂದ್ರಕಾಂತ ಬಿ. ಕುಂದಾಪುರ ಪೊಲೀಸ್ ಠಾಣೆಯ ಎಸ್ ಐ ಪುಷ್ಪ ಇದ್ದರು.