ಬೆಂಗಳೂರು: ಮಹಿಳೆಯ ಅಪಹರಣ ಪ್ರಕರಣ ದಲ್ಲಿ ಬಂಧಿತರಾಗಿರುವ ಶಾಸಕ ಎಚ್.ಡಿ. ರೇವಣ್ಣ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯವು ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಎಸ್ಐಟಿ ಕಸ್ಟಡಿ ಬುಧವಾರಕ್ಕೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ರೇವಣ್ಣರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಏಳು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಯಿತು.
ಕಣ್ಣೀರು ಹಾಕಿದ ರೇವಣ್ಣ: ನ್ಯಾಯಾಲಯವು ಎಸ್ಐಟಿ ಕಸ್ಟಡಿಯಿಂದ ನೇರವಾಗಿ 7 ದಿನ ನ್ಯಾಯಾಂಗ ಬಂಧನವೆಂದು ನೀಡಿದ ಆದೇಶದಿಂದ ಎಚ್.ಡಿ.ರೇವಣ್ಣ ಭಾವುಕರಾದರು. ನ್ಯಾಯಾಲಯದ ಆವರಣದಿಂದ ಹೊರ ಬರುವಾಗ ಕಣ್ಣೀರು ಹಾಕುತ್ತಲೇ ಹೊರಬಂದ ದೃಶ್ಯ ಕಂಡುಬಂತು. ನ್ಯಾಯಾಲಯದ ಆದೇಶದ ಪ್ರತಿ ಎಸ್ಐಟಿ ಅಧಿಕಾರಿಗಳಿಗೆ ಲಭಿಸಿದ ಕೆಲವೇ ಕ್ಷಣಗಳಲ್ಲಿ ನ್ಯಾಯಾಲಯದ ಆವರಣದಿಂದ ನೇರವಾಗಿ ರೇವಣ್ಣ ಅವರನ್ನು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಸಲಾಯಿತು. ಜೈಲಿಗೆ ಸ್ಥಳಾಂತರಿಸುವ ವೇಳೆ ಮುಂಜಾಗ್ರತೆ ಮತ್ತು ಭದ್ರತೆಯ ದೃಷ್ಟಿಯಿಂದ ಜೈಲಿನ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.