ಕನ್ನಡ ಭಾಷೆಗೆ ಮನಸ್ಸುಗಳನ್ನು ಸೆಳೆಯುವ ಶಕ್ತಿ ಇದೆ. ಸಾಮರಸ್ಯ ಮತ್ತು ವಿಶ್ವಮಾನವತೆಯ ಮೌಲ್ಯಗಳನ್ನು ಬೆಳೆಸುವ ಗುಣ ಇದೆ. ಎರಡು ಸಾವಿರ ವರ್ಷಗಳ ಇತಿಹಾಸ ಮತ್ತು ದೀರ್ಘ ಪರಂಪರೆಯನ್ನು ಹೊಂದಿರುವ ಶ್ರೀಮಂತ ಭಾಷೆಯಾದ ಕನ್ನಡವನ್ನು ಇಂದಿನ ಯುವ ಜನತೆ ಬಳಸಿ- ಉಳಿಸಿ -ಬೆಳೆಸುವ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಬೇಕೆಂದು ಕನ್ನಡ ಸಹ ಪ್ರಾಧ್ಯಾಪಕ ನಾಗರಾಜ ವೈದ್ಯ ಎಂ. ಹೇಳಿದರು.
ಕಾಳಾವರ ವರದರಾಜ ಎಂ. ಶೆಟ್ಟಿ ಸ.ಪ್ರ.ದ. ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿ ಹಮ್ಮಿಕೊಳ್ಳಲಾದ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಮರಾಯ ಆಚಾರ್ಯ ಭಾಷೆಯೇ ಬದುಕು. ಬದುಕಿನ ಭಾಷೆ ಸದಾ ಕನ್ನಡವಾಗಿರಬೇಕು. ನಾವಾಡುವ ಭಾಷೆಯಲ್ಲಿ ನಮ್ಮ ಅಸ್ತಿತ್ವ ಇರುವುದರಿಂದ ಭಾಷಾ ಪ್ರೇಮಿಗಳಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಭೌತಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಡಾ. ಮುನಿರತ್ನಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾವ್ಯ, ಅಂಜಲಿ, ಕವನ ಕನ್ನಡ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಐ.ಕ್ಯು. ಎ.ಸಿ. ಸಂಚಾಲಕರಾದ ನಾಗರಾಜ ಯು. ಕಾರ್ಯಕ್ರಮ ನಿರೂಪಿಸಿದರೆ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಮನೋಹರ ಬಿ. ವಂದಿಸಿದರು.