Home » ಕೋಟದ ಕಲೋತ್ಸವದಲ್ಲಿ ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ ಪ್ರದಾನ
 

ಕೋಟದ ಕಲೋತ್ಸವದಲ್ಲಿ ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ ಪ್ರದಾನ

by Kundapur Xpress
Spread the love

ಕೋಟ : ಎಲ್ಲೋ ಬಿದ್ದ ಕಲ್ಲುಗಳನ್ನು ಆರಿಸಿ, ಅವುಗಳನ್ನು ಕೆತ್ತಿ ಮೆತ್ತಿ ಒಳ್ಳೆಯ ಆಕಾರಕೊಟ್ಟು ಹಲವು ಯಕ್ಷ ಶಿಲ್ಪಗಳನ್ನಾಗಿಸಿದ ಕೀರ್ತಿ ಕಾರ್ಕಡ ಶ್ರೀನಿವಾಸ ಉಡುಪರಿಗೆ ಸಲ್ಲುತ್ತದೆ. ಸಮಾನ ಮನಸ್ಕರಾದ ಶ್ರೀಧರ ಹಂದೆಯವರೊಂದಿಗೆ ಸಾಲಿಗ್ರಾಮ ಮಕ್ಕಳ ಮೇಳವನ್ನು ಕಟ್ಟಿ ಮೊತ್ತ ಮೊದಲ ಬಾರಿಗೆ ದಾಖಲೆಯ ಸಾಘರೋಲ್ಲಂಘನಗೈದ ಸಾಹಸವಂತರು. ಉಡುಪರ ಶಿಸ್ತು-ಸಂಯಮ, ದೃಢತೆ, ವಾತ್ಸಲ್ಯಮಯೀ ಗುಣಗಳು ಹಲವರಿಗೆ ಆದರ್ಶಪ್ರಾಯವಾದುದು. ರಾಷ್ಟ್ರಪ್ರಶಸ್ತಿ ಪುರಸ್ಕ್ರತ ಶಿಕ್ಷಕರಾಗಿ, ಲೇಖಕರಾಗಿ, ಒಳ್ಳೆಯ ಕ್ರೀಡಾಳುವಾಗಿ ಸಮಾಜಕ್ಕೆ ತೆರೆದುಕೊಂಡವರು. ಅವರ ಶಿಷ್ಯರಾದ ನಾವೇ ಧನ್ಯರು” ಎಂದು ಮೈಸೂರಿನ ಕೇಂದ್ರ ರೇಶ್ಮೆ ಮಂಡಳಿಯ ನಿವೃತ್ತ ಜಂಟಿ ನಿರ್ದೇಶಕ, ಮಕ್ಕಳ ಮೇಳದ ಪ್ರಾಕ್ತನ ಕಲಾವಿದ ಮೋಹನದಾಸ ಶ್ಯಾನುಭೋಗ್ ಹೇಳಿದರು.

ಕೋಟದ ಪಟೇಲರ ಮನೆಯಲ್ಲಿ ನಡೆದ ಐವತ್ತರ ಸಂಭ್ರಮವನ್ನು ಆಚರಿಸುತ್ತಿರುವ ಸಾಲಿಗ್ರಾಮ ಮಕ್ಕಳ ಮೇಳದ ಸುವರ್ಣ ಪರ್ವ-6ರ ಕಲೋತ್ಸವದ ಎರಡನೆಯ ದಿನದ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣೆ, ಉಡುಪ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮೋಹನದಾಸ್ ಅವರು ಉಡುಪ ಸಂಸ್ಮರಣೆಯ ಮಾತುಗಳನ್ನಾಡಿದರು

ಮಕ್ಕಳ ಮೇಳದ ಅಧ್ಯಕ್ಷ ಬಲರಾಮ ಕಲ್ಕೂರ ಅಧ್ಯಕ್ಷತೆವಹಿಸಿದ್ದರು. ಕುಂದಾಪುರ ವಿಧಾನ ಸಭಾ ಶಾಸಕರಾದ ಕಿರಣ ಕುಮಾರ ಕೊಡ್ಗಿ, ಕಲಾ ಪೋಷಕರೂ, ಮಾಜಿ ಸಚಿವರಾದ ಪ್ರಮೋದ ಮಧ್ವರಾಜ್, ಉಡುಪಿ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ ಕುಂದರ್, ಕರ್ನಾಟಕ ಬ್ಯಾಂಕ್ ಮಹಾ ಪ್ರಬಂಧಕರಾದ ಸುಮನಾ ಘಾಟೆ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಂಗಾಧರ ರಾವ್, ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಶ್ರೀಕಾಂತ ಉಡುಪ, ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ, ಕಾರ್ಯಾಧ್ಯಕ್ಷ ಮಹೇಶ ಉಡುಪ, ಶ್ರೀಮತಿ ಕಲ್ಕೂರ, ವಿನಿತ ಹಂದೆ ಮೊದಲಾದವರು ಉಪಸ್ಥಿತರಿದ್ದರು.
ಉಡುಪ ಪ್ರಶಸ್ತಿಯನ್ನು ಖ್ಯಾತ ಭಾಗವತ ಹೆರೆಂಜಾಲು ಗೋಪಾಲ ಗಾಣಿಗ ದಂಪತಿಗಳಿಗೆ ನೀಡಿ ಗೌರವಿಸಲಾಯಿತು.
ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಸ್ವಾಗತಿಸಿದರು. ಪೂರ್ಣಿಮಾ ಶಂಕರನಾರಾಯಣ ಮತ್ತು ರಶ್ಮಿ ರಘುಪ್ರಸಾದ್ ಪರಿಚಯಿಸಿದರು. ಉಪಾಧ್ಯಕ್ಷ ಜನಾರ್ದನ ಹಂದೆ ವಂದಿಸಿದರು. ಮಾಧುರಿ ಶ್ರೀರಾಮ್ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಪೂರ್ವದಲ್ಲಿ ವಿದ್ವಾನ್ ಶಂಭು ಭಟ್ ಮತ್ತು ಬಳಗದವರಿಂದ ಹಿಂದೂಸ್ಥಾನಿ ಗಾಯನ, ಮತ್ತು ಸಭಾ ಕಾರ್ಯಕ್ರಮದ ಬಳಿಕ ಅತಿಥಿ ಕಲಾವಿದರು ಮತ್ತು ಯಕ್ಷ ಸೌರಭ ಶ್ರೀ ಮಹಾಲಿಂಗೇಶ್ವರ ಕಲಾರಂಗ ಕೋಟ ಇವರಿಂದ ದಕ್ಷ ಯಜ್ಞ ಮತ್ತು ಚಿತ್ರಸೇನ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.

 

Related Articles

error: Content is protected !!