Home » ಕಸ್ತೂರಿ ರಂಗನ್‌ ವರದಿ ವಿರುದ್ಧ ಕಾನೂನು ಹೋರಾಟ ರೂಪಿಸಲು ಸಮಾಲೋಚನ ಸಭೆ
 

ಕಸ್ತೂರಿ ರಂಗನ್‌ ವರದಿ ವಿರುದ್ಧ ಕಾನೂನು ಹೋರಾಟ ರೂಪಿಸಲು ಸಮಾಲೋಚನ ಸಭೆ

by Kundapur Xpress
Spread the love

ಬೈಂದೂರು : ಕಸ್ತೂರಿ ರಂಗನ್‌ ವರದಿ ಅನುಷ್ಠಾನದಿಂದ ಬೈಂದೂರು ವಿಧಾನಸಭಾ ಕ್ಷೇತ್ರದ ಪಶ್ಚಿಮಘಟ್ಟಕ್ಕೆ ಹೊಂದಿಕೊಂಡಿರುವ ಗ್ರಾಮಗಳಿಗೆ ಎದುರಾಗಬಹುದಾದ ಸಮಸ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಕಾನೂನು ಹೋರಾಟ ಸಂಬಂಧ ರಚಿಸಿರುವ ಬೈಂದೂರು ಫೌಂಡೇಶನ್‌ ವತಿಯಿಂದ ಶಾಸಕರಾದ ಗುರುರಾಜ ಗಂಟಿಹೊಳೆ ಅವರ ನೇತೃತ್ವದಲ್ಲಿ ಮಂಗಳವಾರ ಕುಂದಾಪುರದಲ್ಲಿ ಸಮಾಲೋಚನ ಸಭೆ ನಡೆಯಿತು.
ಬೈಂದೂರು ಕ್ಷೇತ್ರಕ್ಕೆ ಹೆಚ್ಚು ಸಮಸ್ಯೆ ನೀಡುತ್ತಿರುವ ಸಿಆರ್‌ಝಡ್‌, ಡೀಮ್ಡ್‌ ಫಾರೆಸ್ಟ್‌(ವನ್ಯಜೀವಿ), ಕಸ್ತೂರಿ ರಂಗನ್‌ ವರದಿ ಅನುಷ್ಠಾನಕ್ಕೆ ಮುಂದಾಗಿರುವ ವಿಚಾರವೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ಹಿರಿಯ ವಕೀಲರು ಹಾಗೂ ಕಾನೂನು ತಜ್ಞರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಶೀಘ್ರವೇ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರನ್ನು ಭೇಟಿ ಮಾಡಿ ಈ ವಿಷಯ ಕುರಿತು ಇನ್ನಷ್ಟು ಚರ್ಚೆ ಮಾಡುವ ಬಗ್ಗೆಯೂ ನಿರ್ಧರಿಸಲಾಯಿತು.

ಶಾಸಕರಾದ ಗುರುರಾಜ್‌ ಗಂಟಿಹೊಳೆ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದು ಒಂದು ಭಾಗವಾದರೆ ಸರ್ಕಾರದ ಕೆಲವು ನೀತಿಗಳು ಜನ ಸಾಮಾನ್ಯರಿಗೆ ಮಾರಕವಾಗುವ ಸಾಧ್ಯತೆಯೂ ಇರುತ್ತದೆ. ಅಂತಹ ಸಂದರ್ಭಗಳಲ್ಲಿ ಹೋರಾಟವನ್ನು ರೂಪಿಸಬೇಕಾಗುತ್ತದೆ. ಬೈಂದೂರು ಫೌಂಡೇಶನ್‌ ಮೂಲಕ ಕಸ್ತೂರಿ ರಂಗನ್‌ ವರದಿ ಅನುಷ್ಠಾನ ವಿರೋಧಿಸಿ ಕಾನೂನು ಹೋರಾಟಕ್ಕೆ ನಾವು ವೇದಿಕೆ ಸಿದ್ಧ ಮಾಡಿಕೊಳ್ಳುತ್ತಿದ್ದೇವೆ. ಅದಕ್ಕೆ ಬೇಕಾದ ದಾಖಲೆ, ಮಾಹಿತಿಗಳನ್ನು ಸಂಗ್ರಹ ಮಾಡುತ್ತಿದ್ದೇವೆ. ಇದರ ಜತೆಗೆ ಫೌಂಡೇಶನ್‌ ಮೂಲಕ ಸಿಆರ್‌ಝಡ್‌, ಡೀಮ್ಡ್‌ ಫಾರೆಸ್ಟ್‌ ಇತ್ಯಾದಿ ಸಮಸ್ಯೆಗಳ ಬಗ್ಗೆಯೂ ಹೋರಾಟಕ್ಕೆ ರೂಪುರೇಷೆ ಸಿದ್ದಪಡಿಸುತ್ತಿದ್ದೇವೆ ಎಂದರು.
ಕಸ್ತೂರಿ ರಂಗನ್‌ ವರದಿ ಅನುಷ್ಠಾನ ಆಗದಂತೆ ನೋಡಿಕೊಳ್ಳುವುದು, ವನ್ಯಜೀವಿ (ಡೀಮ್ಡ್‌ ಫಾರೆಸ್ಟ್‌), ಸಿಆರ್‌ಝಡ್‌, ಮರಳುಗಾರಿಕೆ, ಕಲ್ಲು ಗಣಿಗಾರಿಕೆ ಇತ್ಯಾದಿಗಳಿಂದ ಕ್ಷೇತ್ರದ ಜನ ಸಾಮಾನ್ಯರಿಗೆ ಸಮಸ್ಯೆ ಆಗದಂತೆ ಎಚ್ಚರ ವಹಿಸುವುದು ಇದರ ಉದ್ದೇಶವಾಗಿದೆ ಎಂದರು.
ಹಿರಿಯ ವಕೀಲರಾದ ಟಿ.ಬಿ. ಶೆಟ್ಟಿಯವರು ಮಾತನಾಡಿ ಕಸ್ತೂರಿ ರಂಗನ್‌ ವರದಿ ಅನುಷ್ಠಾನದಿಂದ ಆಗಬಹುದಾದ ಸಮಸ್ಯೆ ಸಹಿತ ಹಲವು ಅಂಶಗಳನ್ನು ವಿವರಿಸಿ, ಈ ಸಂಬಂಧ ಅಗತ್ಯ ದಾಖಲೆಗಳನ್ನು ಕಲೆಹಾಕುವುದರ ಬಗ್ಗೆ ತಿಳಿಸಿದರು.
ಹಿರಿಯ ವಕೀಲರಾದ ಗುರುಮೂರ್ತಿ ಅವರು ವನ್ಯಜೀವಿ, ಡೀಮ್ಡ್‌ ಫಾರೆಸ್ಟ್‌ ಸಮಸ್ಯೆ ಬಗ್ಗೆ ಬೆಳಕು ಚಲ್ಲಿದರು.
ವಕೀಲರ ಸಂಘದ ಅಧ್ಯಕ್ಷರಾದ ಪ್ರಮೋದ್‌ ಹಂದೆ ಅವರು ಸಿಆರ್ಝಡ್‌ ನಿಂದ ಆಗುತ್ತಿರುವ ಸಮಸ್ಯೆ ಮತ್ತು ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದರ ಬಗ್ಗೆ ವಿಶ್ಲೇಷಿಸಿದರು.
ವಕೀಲರಾದ ರಮೇಶ್‌ ಹತ್ವಾರ್‌ ಅವರು ಮೈನಿಂಗ್ಸ್‌ ಬಗ್ಗೆ ವಿವರ ನೀಡಿದರು. ವಕೀಲರಾದ ಸಾಜಿ ಅಬ್ರಾಹಂ ಅವರು ಕೇರಳ ರಾಜ್ಯ ಕಸ್ತೂರಿ ರಂಗನ್‌ ವರದಿಯಿಂದ ಪಾರಾಗಿದ್ದು ಹೇಗೆ ಮತ್ತು ಕಾನೂನು ಹೋರಾಟ ಹೇಗಿತ್ತು ಎಂಬುದರ ಮಾಹಿತಿ ನೀಡಿ, ಅಲ್ಲಿಗೆ ಭೇಟಿ ನೀಡಿ ದಾಖಲೆ ಸಂಗ್ರಹಿಸುವ ಬಗ್ಗೆ ತಿಳಿಸಿದರು.
ಉಪ್ಪುಂದದ ವಕೀಲರಾದ ರಾಘವೇಂದ್ರ ಅವರು ಕಸ್ತೂರಿ ರಂಗನ್‌ ವರದಿ ಅನುಷ್ಠಾನದಿಂದ ಆಗಬಹುದಾದ ಸಮಸ್ಯೆಯನ್ನು ಬಿಚ್ಚಿಟ್ಟರು.
ವಕೀಲರ ಸಂಘದ ಕೆ.ಬಿ. ಶೆಟ್ಟಿ, ಶರತ್‌ ಶೆಟ್ಟಿ, ಪ್ರವೀಶ್‌ ಚಂದ್ರ, ಪ್ರಶಾಂತ್‌ ಶೆಟ್ಟಿ, ರಜನಿಕಾಂತ್‌, ಫೌಂಡೇಷನ್‌ ಸಂಯೋಜಕ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ರವಿಚಂದ್ರ ಹಾಗೂ ಹಿರಿಯ ಕಿರಿಯ ವಕೀಲರು, ಕಾನೂನು ತಜ್ಞರು ಸಭೆಯಲ್ಲಿ ಉಪಸ್ಥಿತರಿದ್ದರು..

   

Related Articles

error: Content is protected !!