ಕುಂದಾಪುರ : ಉಡುಪಿಯ ಯಕ್ಷ ಶಿಕ್ಷಣ ಟ್ರಸ್ಟ್, ಕುಂದಾಪುರದ ಪ್ರದರ್ಶನ ಸಂಘಟನಾ ಸಮಿತಿ ಮತ್ತು ಯಕ್ಷಗಾನ ಕಲಾರಂಗದ ಸಹಯೋಗದಲ್ಲಿ ಕುಂದಾಪುರದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ಈ ಭಾಗದ ಆರು ಶಾಲೆಗಳ ಕಿಶೋರ ಯಕ್ಷಗಾನ ಪ್ರದರ್ಶನಗಳನ್ನು ಶಾಸಕ ಕಿರಣ್ ಕುಮಾರ್ ಕೊಡ್ಗಿಯವರು ಇಂದು ಉದ್ಘಾಟಿಸಿದರು.
ಈ ಮಹಾಭಿಯಾನ ಯಶಸ್ವಿಯಾಗುವಲ್ಲಿ ಕಲಾರಂಗದ ಕಾರ್ಯಕರ್ತರ ಅರ್ಪಣಾ ಮನೋಭಾವ ಕಾರಣವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ತಹಶೀಲ್ದಾರಾದ ಪ್ರದೀಪ ಕುರ್ಡೇಕರ್ ಹೊರ ಜಿಲ್ಲೆ ಹೊರ ರಾಜ್ಯದ ವಿದ್ಯಾರ್ಥಿಗಳೂ ಭಾಗವಹಿಸುತ್ತಿರುವದನ್ನು ನೋಡಿದರೆ ಯಕ್ಷಗಾನವನ್ನು ವಿಸ್ತರಿಸುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ ಎಂದು ಅಭಿಪ್ರಾಯ ಪಟ್ಟರು. ಸೃಷ್ಟಿ ಇನ್ಫೊ ಟೆಕ್ ನ ಎಂ.ಡಿ.ಹರ್ಷವರ್ಧನ ಶೆಟ್ಟಿಯವರು ಮೊಬಯ್ಲ್ ಹಾವಳಿಯಿಂದ ಮುಕ್ತರಾಗಲು, ಪುರಾಣ ಜ್ಞಾನ ಬೆಳೆಸಿಕೊಳ್ಳಲು ಯಕ್ಷಗಾನ ಅತ್ಯುತ್ತಮ ಸಾಧನ ಎಂದರು. ಸಿ. ಎ. ಬ್ಯಾಂಕ್ ಅಧ್ಯಕ್ಷ ಸದಾನಂದ ಬಳ್ಕೂರ, ಪುರಸಭೆಯ ಮಾಜಿ ಉಧ್ಯಕ್ಷ ಮೋಹನದಾಸ ಶೆಣೈ , ಕಾಲೇಜಿನ ಉಪ ಪ್ರಾಂಶುಪಾಲ ಕಿರಣ್ ಹೆಗ್ಡೆ, ಕಲಾರಂಗದ ಯು. ಎಸ್ ರಾಜಗೋಪಾಲ ಆಚಾರ್ಯ ಅಭ್ಯಾಗತರಾಗಿ ಭಾಗವಹಿಸಿದ್ದರು. ಡಾ. ರಾಜೇಶ ನಾವುಡ, ಸಂಘಟನಾ ಸಮಿತಿಯ ಸುಧೀರ್ ಕೆ. ಎಸ್.ಉಪಸ್ಥಿತರಿದ್ದರು. ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.
ಸರಕಾರಿ ಪ್ರೌಢ ಶಾಲೆ, ಕೆದೂರು ಇಲ್ಲಿನ ವಿದ್ಯಾರ್ಥಿಗಳಿಂದ ತರಣಿಸೇನ ಕಾಳಗ, ಸರಕಾರಿ ಪ. ಪೂ. ಕಾಲೇಜು,ತೆಕ್ಕಟ್ಟೆ ಇಲ್ಲಿಯ ವಿದ್ಯಾರ್ಥಿಗಳಿಂದ ಯಕ್ಷೋತ್ತಮ ಕಾಳಗ ಸೊಗಸಾಗಿ ಪ್ರಸ್ತುತಗೊಂಡಿತು.

