ಕೋಟೇಶ್ವರ : ಇದೇ ನ. 27 ನೇ ಸೋಮವಾರ ಕೋಟೇಶ್ವರದಲ್ಲಿ ನಡೆಯಲಿರುವ ಮಹತೋಬಾರ ಶ್ರೀ ಕೋಟಿಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರೆ ಕೊಡಿಹಬ್ಬಕ್ಕಾಗಿ ಕೋಟೇಶ್ವರ ಮತ್ತು ಪರಿಸರದ ಗ್ರಾಮಗಳಲ್ಲಿ ತಯಾರಿಗಳು ಬಿರುಸಿನಿಂದ ನಡೆದಿವೆ.
ಕೋಟೇಶ್ವರ ಮುಖ್ಯರಸ್ತೆಯ ಬಡಗುಪೇಟೆಯಲ್ಲಿನ ವಿಶಾಲ ಸ್ಥಳದಲ್ಲಿ ಟೋರಾ ಟೋರಾ, ಜಯಂಟ್ ವೀಲ್ ಗಳು ಶುರುವಾಗಿವೆ. ಮಣಿಸರಕು, ಮಿಠಾಯಿ ಅಂಗಡಿಗಳೂ ಅಲ್ಲಲ್ಲಿ ವ್ಯವಹಾರ ಆರಂಭಿಸಿವೆ. ದೇವಾಲಯ ರಥಬೀದಿಯಲ್ಲಿ ಶುಕ್ರವಾರ ಮೆಸ್ಕಾಂ ನವರು ಮೂರು ಎತ್ತರದ ತಂತಿ ಕಂಬಗಳನ್ನು ನೆಟ್ಟು ಸಮರ್ಪಕ ವಿದ್ಯುತ್ ವ್ಯವಸ್ಥೆಗಳನ್ನು ಮಾಡಿದ್ದಾರೆ. ಹಬ್ಬ, ಉತ್ಸವಗಳು ನಡೆಯುವೆಡೆ ವಿದ್ಯುತ್ ಲೈನ್ ಗಳನ್ನು ಅಗತ್ಯ ದುರಸ್ಥಿಗೊಳಿಸಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ದೇವಾಲಯದ ಒಳಭಾಗದಲ್ಲಿನ ಸುತ್ತಿನಲ್ಲಿ ಸುಮಾರು ಐದು ಸಾವಿರ ಚದರಡಿಯಷ್ಟು ಕಲ್ಲು ಚಪ್ಪಡಿ ಹಾಸುವ ಕಾರ್ಯ ಮುಗಿದಿದೆ. ಬುಧವಾರ ಮುಂಜಾನೆ ಆರು ಚಕ್ರಗಳ ಬ್ರಹ್ಮ ರಥದ ರಥ ಮುಹೂರ್ತ ನಡೆದಿದ್ದು, ದೇವಾಡಿಗ ಬಂಧುಗಳು ಪಾರಂಪರಿಕ ರಥ ಕಟ್ಟುವ ಕಾರ್ಯ ನಡೆಸಿದ್ದಾರೆ. ಈ ಕಾರ್ಯ ಪೂರ್ಣಗೊಂಡಾಗ ನೆಲಮಟ್ಟದಿಂದ 42 ಅಡಿ ಎತ್ತರದ ಬ್ರಹ್ಮರಥವು ಕೆಂಪು – ಬಿಳಿ ಪತಾಕೆ, ಚಿತ್ರಪಟಗಳು, ಫಲ – ಪುಷ್ಪಗಳಿಂದಲಂಕೃತಗೊಂಡು ಆಕರ್ಷಕವಾಗಿ ಕಾಣುತ್ತದೆ. ರಥೋತ್ಸವಕ್ಕೆ ಬಂದವರು ಈ ಬ್ರಹ್ಮರಥದ ಮುಂದೊಂದು ಸೆಲ್ಫಿ ತೆಗೆದುಕೊಳ್ಳದಿದ್ದರೆ ಅವರಿಗೆ ಹಬ್ಬ ಪೂರ್ಣವಾದಂತೆನಿಸುವುದಿಲ್ಲ!