ಉಡುಪಿ : ವಾಲ್ಮೀಕಿ ನಿಗಮ ಸಿಬ್ಬಂದಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ನಾಗೇಂದ್ರ ರಾಜೀನಾಮೆ ನೀಡದಿದ್ದಲ್ಲಿ ರಾಜ್ಯಾದ್ಯಂತ ಹೋರಾಟವನ್ನು ನಡೆಸಲಾಗುತ್ತದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎತ್ತ ಸಾಗುತ್ತಿದೆ ಎನ್ನುವುದಕ್ಕೆ ಈ ಪ್ರಕರಣ ನಿದರ್ಶನ. ಬಡವರ ಮಕ್ಕಳಿಗೆ ಮೀಸಲಿಟ್ಟ ನಿಗಮದಲ್ಲಿ 80 ಕೋಟಿ ರು. ಗಳನ್ನು ಸಚಿವರ ಸೂಚನೆ ಮೇರೆಗೆ ದುರುಪಯೋಗ ಮಾಡಲಾಗಿದೆ ಎಂದು ಸಿಬ್ಬಂದಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಬಡವರ ಬಗ್ಗೆ, ದಲಿತರ ಬಗ್ಗೆ ಕಾಳಜಿ ಇದೆ ಎನ್ನುತ್ತೀರಿ. ಇದು ನಿಮ್ಮ ಕಾಳಜಿಯ ದ್ಯೋತಕವೇ ? ಸಚಿವ ನಾಗೇಂದ್ರ ವಿರುದ್ಧ ನೇರ ಆರೋಪ ಮಾಡಿ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಕೂಡ ಸಚಿವರನ್ನು ಸಚಿವ ಸಂಪುಟದಲ್ಲಿ ಹೇಗೆ ಮುಂದುವರಿಸಿಕೊಂಡು ಹೋಗುತ್ತೀರಿ ? ನಿಮ್ಮ ಆಡಳಿತದ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನು ನಾವು ಪ್ರಶ್ನಿಸಬೇಕಾಗಿದೆ. ತಕ್ಷಣ ಸಚಿವ ನಾಗೇಂದ್ರ ಅವರನ್ನು ಕೈಬಿಡಿ, ಸಿಬಿಐ ತನಿಖೆ ಮಾಡಿಸಿ ಭ್ರಷ್ಟಾಚಾರಿಗಳನ್ನು ಹೊರಗೆಳೆಯಿರಿ,. ಲೂಟಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದವರು ಆಗ್ರಹಿಸಿದರು.