ಉಡುಪಿ : ಸಪ್ತ ಮೋಕ್ಷ ಕ್ಷೇತ್ರಗಳಲ್ಲೊಂದಾದ ವಿಶ್ವವಿಖ್ಯಾತ ಉಡುಪಿ ಶ್ರೀಕೃಷ್ಣಮಠದಲ್ಲಿರುವ ‘ಮಧ್ವ ಸರೋವರ’ ವು ಪತಿತ ಪಾವನೆಯಾದ ಗಂಗಾ ಸಾನ್ನಿಧ್ಯಯುಕ್ತವಾಗಿರುವುದು ಪ್ರಸಿದ್ಧವಾಗಿದೆ. ಶ್ರೀಮದಾನಂದತೀರ್ಥ ಭಗವತ್ಪಾದರಿಂದ ಆಹೂತಳಾಗಿ ಅವರ ಆಜ್ಞಾನುಸಾರ ಮಧ್ವಸರಸ್ಸಿಗೆ ಗಂಗಾದೇವಿಯು ಆಗಮಿಸಿದ್ದು, ಶ್ರೀಮಧ್ವಾಚಾರ್ಯರೊಂದಿಗೆ ಭಕ್ತಜನರು ಸ್ನಾನ ಮಾಡಿದ್ದು, ಈ ಅಲೌಕಿಕ ಘಟನೆಯು ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಪುನರಾವರ್ತನೆಯಾಗಿ ಮಧ್ವ ಸರೋವರದಲ್ಲಿ ಗಂಗಾವತಾರಣವಾಗುವುದು” ಎಂದು ಉಲ್ಲೇಖಿಸಲಾಗಿದೆ
ತ್ರೈಲೋಕ್ಯ ಗುರುಗಳಾದ ಶ್ರೀ ಮಧ್ವಾಚಾರ್ಯರ ಅಮಿತ ಆತ್ಮಶಕ್ತಿ ಹಾಗು ಅಪ್ರತಿಮವಾದ ತಪಸ್ಸಿನ ದ್ಯೋತಕವಾಗಿ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಮಧ್ವ ಸರೋವರದಲ್ಲಿ ಗಂಗೋದ್ಭವವಾಗುವುದು ಅಪರೋಕ್ಷ ಜ್ಞಾನಿಗಳಿಂದ ಪ್ರತ್ಯಕ್ಷ ದೃಷ್ಟವಾದ ವಿಚಾರವಾಗಿದೆ.1925 ನೇ ಇಸವಿಯಲ್ಲಿ , ಶ್ರೀ ಅದಮಾರು ಮಠದ ವಿಬುಧಪ್ರಿಯತೀರ್ಥ ಶ್ರೀಪಾದಂಗಳ ಪರ್ಯಾಯದ ಅವಧಿಯಲ್ಲಿ ಮಧ್ವ ಸರೋವರದಲ್ಲಾದ ಗಂಗೋದ್ಭವದ ದಿವ್ಯ ವಿದ್ಯಮಾನದ ಸಂಸ್ಮರಣೆಗಾಗಿ ಮಧ್ವಸರೋವರದ ತಟದಲ್ಲಿ ಗಂಗಾ ಭಾಗೀರಥಿಯ ಗುಡಿಯೊಂದನ್ನು ನಿರ್ಮಿಸಿದ್ದು ಪ್ರಸಕ್ತ ವರ್ಷ 2025 ರಲ್ಲಿ ಇದಕ್ಕೆ ಶತಮಾನ ತುಂಬುವ ಅಪೂರ್ವ ಸಂದರ್ಭದಲ್ಲಿ*ಪರ್ಯಾಯ ಶ್ರೀಗಳ ದಿವ್ಯೋಪಸ್ಥಿತಿಯಲ್ಲಿ ಮಧ್ವ ಸರೋವರದಲ್ಲಿ ಸಂಕಲ್ಪಪೂರ್ವಕ ಧಾರ್ಮಿಕ ವಿಧಿ ಕಾರ್ಯಕ್ರಮ ಹಾಗೂ ಸಂಕಲ್ಪಪೂರ್ವ ಗಂಗಾ ಸ್ನಾನ ನೆರವೇರಿತು

