ಕುಂದಾಪುರ : ಕರ್ತವ್ಯ ನಿರತ ವೈದ್ಯಾಧಿಕಾರಿಯನ್ನು ನಿಂದಿಸಿ ಜೀವ ಬೆದರಿಕೆ ಹಾಕಿ ಹಲ್ಲೆ ನಡೆಸಲು ಮುಂದಾಗಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಕುಂದಾಪುರದ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಸರಕಾರಿ ಆಸ್ಪತ್ರೆಯಲ್ಲಿ ಕಳೆದ ಎರಡುವರೆ ವರ್ಷಗಳಿಂದ ತುರ್ತು ಚಿಕಿತ್ಸಾ ವೈದ್ಯಾಧಿ ಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮೂರ್ತಿರಾಜ್ ಎಂಬವರು ನ.3ರಂದು ರಾತ್ರಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ಕರ್ತವ್ಯದಲ್ಲಿರುವಾಗ ರಾಧ ಎಂಬಾಕೆ ಇನ್ನೋರ್ವ ಮಹಿಳೆಯೊಂದಿಗೆ ಹೊಟ್ಟೆ ನೋವೆಂದು ಚಿಕಿತ್ಸೆಗೆ ಬಂದಿದ್ದು, ಅವರನ್ನು ಶುಶ್ರೂಶಾಧಿಕಾರಿ ಶೋಭಾ ಕುಮಾರಿ ಅವರ ಸಮಕ್ಷಮದಲ್ಲಿ ಸಮಾಲೋಚನೆ ನಡೆಸಿ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿ ಒಳರೋಗಿಯಾಗಿ ದಾಖಲಾಗಲು ಸೂಚಿಸಿ ಆಸ್ಪತ್ರೆಯ ಕೇಸ್ ಶೀಟ್ನ್ನು ಬರೆದು ಕೊಟ್ಟಿದ್ದರು. ಈ ಸಂದರ್ಭ ರಾಧಾ ಅವರ ಪತಿ ನಾಗರಾಜ ಬೀಜಾಡಿ ಎಂಬವರು ಬಂದಿದ್ದು ಅವರಲ್ಲಿ ಎಡ್ಮಿಶನ್ ಮಾಡಿ ಬರಲು ತಿಳಿಸಿದ್ದರು. ಆ ಬಳಿಕ ನಾಗರಾಜ ಏಕಾಏಕಿ ತುರ್ತುಚಿಕಿತ್ಸಾ ಕೊಠಡಿಗೆ ಬಂದು ಕರ್ತವ್ಯ ನಿರತರಾಗಿದ್ದ ವೈದ್ಯಾಧಿಕಾರಿಯನ್ನು ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ಮಾಡಲು ಮುಂದಾಗಿದಲ್ಲದೆ ಟೇಬಲ್ ಮೇಲಿದ್ದ ಸರಕಾರಿ ದಾಖಲೆಗಳನ್ನು ಹರಿದು ಬಿಸಾಡಿ, ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ರಾಧಾ ಅವರ ವೈದ್ಯಕೀಯ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ನಂತರ ಆಸ್ಪತ್ರೆಯ ಕಾರಿಡಾರ್ನಲ್ಲಿ ನಾಗರಾಜ ಹಾಗೂ ಇನ್ನೋರ್ವ ಮಹಿಳೆಯು ಪುನಃ ವೈದ್ಯಾಧಿಕಾರಿಯನ್ನು ಅವಾಚ್ಯ ಶಬ್ದದಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.