ಕುಂದಾಪುರ : ಕುಂದಾಪುರ ಪುರಸಭೆಯ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿಯ ಹಿರಿಯ ಸದಸ್ಯ ಮೋಹನ್ದಾಸ್ ಶೆಣೈ ಹಾಗೂ ಉಪಾಧ್ಯಕ್ಷೆಯಾಗಿ ವನಿತಾ ಎಸ್. ಬಿಲ್ಲವ ಆಯ್ಕೆಯಾಗಿದ್ದಾರೆ.
ಮೀಸಲಾತಿಯಂತೆ ಈ ಬಾರಿ ಅಧ್ಯಕ್ಷ ಸ್ಥಾನ ಸಾಮಾನ್ಯರಿಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಯರಿಗೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಮೋಹನ್ದಾಸ್ ಶೆಣೈ ಹಾಗೂ ಕಾಂಗ್ರೆಸ್ ನಿಂದ ಚಂದ್ರಶೇಖರ ಖಾರ್ವಿ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ವನಿತಾ ಎಸ್. ಬಿಲ್ಲವ ಹಾಗೂ ಕಾಂಗ್ರೆಸ್ ಬೆಂಬಲದೊಂದಿಗೆ ಪಕ್ಷೇತರ ಸದಸ್ಯೆ ಕಮಲಾ ಮಂಜುನಾಥ ಪೂಜಾರಿ ನಾಮಪತ್ರ ಸಲ್ಲಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಎ.ಕಿರಣ್ ಕುಮಾರ್ ಕೊಡ್ಡಿ ಸೇರಿ ಬಿಜೆಪಿ ಪಾಳಯದಲ್ಲಿ 16 ಮತಗಳ ಸಂಗ್ರಹವಿತ್ತು. ವಯುಕ್ತಿಕ ಕಾರಣಗಳಿಂದಾಗಿ ಕಾಂಗ್ರೆಸ್ ಸದಸ್ಯೆ ಲಕ್ಷ್ಮೀ ಬಾಯಿ ಗೈರು ಹಾಜರಾಗಿದ್ದರಿಂದ ಚಲಾವಣೆಯಾದ 24 ಮತಗಳಲ್ಲಿ 16-8 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ
ಪುರಸಭೆಯಲ್ಲಿ ಗುರುವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕುಂದಾಪುರ ತಹಸೀಲ್ದಾರ್ ಎಚ್ ಎಸ್. ಶೋಭಾಲಕ್ಷ್ಮಿ ಚುನಾವಣಾಧಿಕಾರಿಯಾಗಿದ್ದರು. ಪುರಸಭೆಯ ಮುಖ್ಯಾಧಿಕಾರಿ ಆನಂದ ಇದ್ದರು. ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಎ.ಕಿರಣ್ ಕುಮಾರ್ ಕೊಡ್ಲಿ, ಬಿಜೆಪಿ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಪ್ರಮುಖರಾದ ಸುರೇಶ್ ಶೆಟ್ಟಿ ಗೋಪಾಡಿ, ಸುಧೀರ್ಕೆ.ಎಸ್., ವಿಜಯ್ ಎಸ್. ಪೂಜಾರಿ, ಸಂಪತ್ ಕುಮಾರಶೆಟ್ಟಿ ಹಾಗೂ ಪುರಸಭಾ ಸದಸ್ಯರು ಅಭಿನಂದಿಸಿದರು