Home » “ಬೈಂದೂರು ಉತ್ಸವ 2024″ರ ಲಾಂಛನ ಬಿಡುಗಡೆ
 

“ಬೈಂದೂರು ಉತ್ಸವ 2024″ರ ಲಾಂಛನ ಬಿಡುಗಡೆ

ಸಂಸದ ಬಿ.ವೈ.ರಾಘವೇಂದ್ರ

by Kundapur Xpress
Spread the love

ಬೈಂದೂರು : ಕ್ರಿಯಾಶೀಲ ಜನಪ್ರತಿನಿಧಿಗಳಿಂದ ಬದಲಾವಣೆ ಸಾಧ್ಯ ಎನ್ನುವುದಕ್ಕೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ನೇತೃತ್ವದಲ್ಲಿ ನಡೆಯುತ್ತಿರುವ ಬೈಂದೂರು ಉತ್ಸವ ಸಾಕ್ಷಿಯಾಗಲಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಹೇಳಿದರು. ಅವರು ಸೋಮವಾರ ಬೆಳಿಗ್ಗೆ ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನ ಪಡೆದ ಸಂಸದ ಬಿ.ವೈ.ರಾಘವೇಂದ್ರ, ಬಳಿಕ ಬೈಂದೂರಿನ ಶ್ರೀ ಸೇನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ನವೆಂಬರ್ 1ರಿಂದ 3ರವರೆಗೆ ಬೈಂದೂರಿನ ಗಾಂಧೀ ಮೈದಾನದಲ್ಲಿ ಆಯೋಜಿಸಿರುವ ಬೈಂದೂರು ಉತ್ಸವ 2024 ರ ಅಧಿಕೃತ ಲಾಂಛನವನ್ನು ಸೋಮವಾರ ಬೈಂದೂರಿನ ಶ್ರೀ ಸೇನೇಶ್ವರ ದೇವಸ್ಥಾನದ ಆವರಣದಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.ಸಮೃದ್ದ ಬೈಂದೂರು ಮೂಲಕ ಬೈಂದೂರು ಕ್ಷೇತ್ರದ ಭಾಷೆ, ಕಲೆ ಸಂಸ್ಕೃತಿಯನ್ನು ಇಡೀ ಜಗತ್ತು ನೋಡಬೇಕು ಎನ್ನುವ ಕಾರಣಕ್ಕೆ ನಡೆಯುವ ಬೈಂದೂರು ಉತ್ಸವಕ್ಕೆ ಹೆಚ್ಚು ಮಹತ್ವ ಪಡೆದುಕೊಳ್ಳಲಿದೆ ಎಂದರು.ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಬೈಂದೂರು ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತಿರುವ ಕ್ಷೇತ್ರ. ಬೈಂದೂರು ಉತ್ಸವದಲ್ಲಿ ರಾಜ್ಯದಲ್ಲಿಯೇ ಕುಗ್ರಾಮವಾಗಿದ್ದ ಬೈಂದೂರು ಕ್ಷೇತ್ರ ಕಳೆದ ಹದಿನೈದು ವರ್ಷಗಳಿಂದ ಅಭಿವೃದ್ಧಿಯತ್ತ ಸಾಗುತ್ತಿದೆ. ಕುಂದಾಪ್ರ ಭಾಷೆಗೆ ಕಿರೀಟವಿಟ್ಟಂತೆ ನಮ್ಮ ಗ್ರಾಮೀಣ ಕಲೆ, ಸಂಸ್ಕೃತಿಗಳನ್ನು ಪ್ರತಿಬಿಂಬಿಸುವುದಕ್ಕಾಗಿ ಬೈಂದೂರು ಉತ್ಸವ ಸಜ್ಜಾಗುತ್ತಿದೆ. ಈ ಕಾರ್ಕ್ರಮದ ಬೆನ್ನೆಲುಬಾಗಿ ಸಂಸದ ಬಿ.ವೈ. ರಾಘವೇಂದ್ರ ಅವರ ಸಹಕಾರವಿದೆ ಎಂದರು.ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ಬೈಂದೂರು ಇದರ ಅಧ್ಯಕ್ಷ ಬಿ.ಎಸ್.ಸುರೇಶ್ ಶೆಟ್ಟಿ ಮಾತನಾಡಿ, ಬೈಂದೂರು ಮೂಲದ ಹೊರದೇಶ ಹಾಗೂ ಹೊರರಾಜ್ಯ, ಜಿಲ್ಲೆಗಳಲ್ಲಿ ಇರುವ ನಮ್ಮ ಜನರನ್ನು ಒಟ್ಟುಗೂಡಿಸಿಕೊಂಡು ಬೈಂದೂರು ಪ್ರವಾಸೋದ್ಯಮ ಅಭಿವೃದ್ಧಿಯ ಜೊತೆಗೆ, ನಮ್ಮೂರಿನ ಕಲೆ, ಸಂಸ್ಕೃತಿ, ಕೃಷಿ, ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಾ ಇಡೀ ಜಗತ್ತಿಗೇ ಸಾರುವ ಕೆಲಸವನ್ನು ಬೈಂದೂರು ಉತ್ಸವ ಮಾಡಲಿದೆ. ಇದಕ್ಕೆ ಶಾಸಕ ಗುರುರಾಜ್ ಗಂಟಿಹೊಳೆ ಹಾಗೂ ಸಂಸದ ರಾಘವೇಂದ್ರ ನಮ್ಮ ಜೊತೆಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು.ಇದೇ ಸಂದರ್ಭ ಬೈಂದೂರು ಉತ್ಸವಕ್ಕೆ ಪೂರಕವಾಗಿ ಯುದ್ಧ ನೌಕೆ, ವಿಜ್ಞಾನ ರೈಲು, ಯುದ್ಧ ವಿಮಾನಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಸಂಸದರಿಗೆ ಶಿಕ್ಷಕ ಶ್ರೀಧರ ಆವರ್ಸೆ ಮತ್ತು ಬೈಂದೂರು ಉತ್ಸವದ ಸಂಚಾಲಕ ಶ್ರೀ ಗಣೇಶ್ ಗಾಣಿಗ ಮನವಿ ಸಲ್ಲಿಸಿದರು. ಬೈಂದೂರು ಉತ್ಸವದ ಸಂಚಾಲಕ ಶ್ರೀ ಗಣೇಶ್ ಗಾಣಿಗ, ಲಾಂಛನ ವಿನ್ಯಾಸಕಾರ ಪುರಂದರ ಉಪ್ಪುಂದ, ತಾಲೂಕು ಪಂಚಾಯತ್ ಸದಸ್ಯ ಪುಷ್ಪರಾಜ್ ಶೆಟ್ಟಿ, ಬಿಜೆಪಿ ಯುವ ಮೋರ್ಛಾ ಅಧ್ಯಕ್ಷ ಗಜೇಂದ್ರ, ಕೊಲ್ಲೂರು ದೇವಳದ ಮಾಜೀ ಧರ್ಮದರ್ಶಿ ಕೃಷ್ಣಪ್ರಸಾದ್ ಅಡ್ಯಂತಾಯ, ಲಾವಣ್ಯ ಬೈಂದೂರು ಅಧ್ಯಕ್ಷ ಬಿ. ನರಸಿಂಹ ನಾಯಕ್, ಸಾಹಿತಿಗಳಾದ ಪುಂಡಲೀಕ ನಾಯಕ್, ಶರತ್ ಶೆಟ್ಟಿ ಬಿಜೂರು ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು. ಸುರಭಿ ಬೈಂದೂರು ಇದರ ಅಧ್ಯಕ್ಷ ಸುಧಾಕರ ಪಿ. ಬೈಂದೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ವಂದಿಸಿದರು.

   

Related Articles

error: Content is protected !!