ಕುಂದಾಪುರ : ಗಂಗೊಳ್ಳಿ ಸಮೀಪದ ಗುಜ್ಜಾಡಿ ಗ್ರಾಮ ಪಂಚಾಯತ್ ನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆಪಾದಿಸಿ ತನಿಖೆ ನಡೆಸುವಂತೆ ಕೋರಿ ಗ್ರಾ.ಪಂ. ಉಪಾಧ್ಯಕ್ಷೆ ನಾಗರತ್ನಾ ಎಂ. ಖಾರ್ವಿ ಅವರು ಇಒ, ಪಿಡಿಒ, ಎಂಜಿನಿಯರ್ ವಿರುದ್ಧ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ
ಗುಜ್ಜಾಡಿ ಗ್ರಾ.ಪಂ.ನಲ್ಲಿ 2021ರಿಂದ 2024ರವರೆಗೆ ಸರಕಾರದ ವಿವಿಧ ಲೆಕ್ಕ ಶೀರ್ಷಿಕೆಯಡಿ, ಮಂಜೂರು ಆಗಿರುವ ಲಕ್ಷಾಂತರ ರೂ. ಹಣವನ್ನು ಕೆಲವು ಕಾಮಗಾರಿ ಗಳನ್ನು ಮಾಡದೇ ನಕಲಿ ನಿರ್ಣಯ ಲಗತ್ತಿಸಿ ನಕಲಿ ಬಿಲ್ ಗಳನ್ನು ಲಗತ್ತಿಸಿ ಸರಕಾರದ ಹಣ ಲೂಟಿ ಮಾಡಲಾಗಿದೆ. ಮುಂಗಡ ಹಣವನ್ನು ಕಾಮಗಾರಿಗಾಗಿ ಯಾವುದೇ ಅನುಮತಿ ಯಿಲ್ಲದೇ ಪಡೆದುಕೊಂಡು ಸರಕಾರಕ್ಕೆನಷ್ಟ ಉಂಟುಮಾಡಿದ್ದಾರೆ. ಈ ಬಗ್ಗೆ ಪಿಡಿಒ, ಕಾರ್ಯನಿರ್ವಹಣಾಧಿಕಾರಿ ಶಶಿಧರ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ರವಿಶಂಕರ್ ಅವರ ವಿರುದ್ದ ಜಿ.ಪಂ. ಸಿಇಒ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಇಒ ಶಶಿಧರ ಅವರಿಗೆ ತನಿಖೆಮಾಡುವಂತೆ ಸೂಚಿಸಿದ್ದರು. ಆದರೆ ಇಒ ಭ್ರಷ್ಟಾಚಾರದ ತನಿಖೆ ಮಾಡದೆ 10 ಬಾರಿ ತಾಲೂಕು ಪಂಚಾಯತಿಗೆ ಅಲೆದರೂ ಮಹಿಳೆಯಾದ ನನ್ನ ದೂರಿಗೆ ಸ್ಪಂದಿಸಲಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.