ಉಡುಪಿ : ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಮಹಾ ಸಂಪರ್ಕ ಅಭಿಯಾನದ ಸಭೆ ನಡೆಯಿತು ಉಡುಪಿ ನಗರ ಮಂಡಲದ ಸಭೆಯಲ್ಲಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಭಾಗವಹಿಸಿ, ‘ಮಹಾ ಸಂಪರ್ಕ ಅಭಿಯಾನ‘ದ ಕರ ಪತ್ರವನ್ನು ಬಿಡುಗಡೆಗೊಳಿಸಿದರು
ಪಕ್ಷದ ಸೂಚನೆಯಂತೆ ಮಹಾ ಸಂಪರ್ಕ ಅಭಿಯಾನದಡಿ ಮಂಡಲ ವ್ಯಾಪ್ತಿಯ ಹಿರಿಯ ಬಿಜೆಪಿಗರ ಸಮಾವೇಶ, ವ್ಯಾಪಾರಿಗಳ ಸಮಾವೇಶ, ಮಂಡಲ ಕಾರ್ಯಕಾರಿಣಿ ಸಭೆಯನ್ನು ಆಯೋಜಿಸುವ ಜೊತೆಗೆ ಪ್ರಧಾನಿ ಮೋದಿ ಆಡಳಿತದ 9 ವರ್ಷಗಳ ಸಾಧನೆಗಳನ್ನು ಪ್ರಚುರಪಡಿಸಲು ಮನೆ ಮನೆ ಬೇಟಿ, ಮಂಡಲ ವ್ಯಾಪ್ತಿಯಲ್ಲಿ 100 ಮಂದಿ ವೃತ್ತಿಪರರು ಮತ್ತು ಸಾಮಾಜಿಕ ಪ್ರಮುಖರ ತಂಡ ರಚನೆ, ಬೂತ್ ವಾರು 100 ಮಂದಿ ಸಕ್ರಿಯ ಕಾರ್ಯಕರ್ತರ ತಂಡ ರಚನೆ, ಮಂಡಲ ಪದಾಧಿಕಾರಿಗಳ ಸೌಹಾರ್ದ ಕೂಟ ಆಯೋಜನೆ ಹಾಗೂ ಸೋಷಿಯಲ್ ಮೀಡಿಯಾ ತಂಡವನ್ನು ಸಕ್ರಿಯಗೊಳಿಸುವುದು ಇತ್ಯಾದಿ ಪ್ರಮುಖ ಕಾರ್ಯ ಯೋಜನೆಗಳನ್ನು ಜುಲೈ ತಿಂಗಳಲ್ಲಿ ವ್ಯವಸ್ಥಿತವಾಗಿ ಹಮ್ಮಿಕೊಳ್ಳಬೇಕು ಎಂದರು.
ಬಿಜೆಪಿ ಕಾರ್ಯಕರ್ತ ಆಧಾರಿತ ರಾಜಕೀಯ ಪಕ್ಷ. ಕಾರ್ಯಕರ್ತರೇ ಪಕ್ಷದ ಜೀವಾಳ. ಯಾವುದೇ ವೈಪರೀತ್ಯಗಳ ನಡುವೆಯೂ ಪಕ್ಷ ನೀಡುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿಭಾಯಿಸುವ ಕಾರ್ಯಕ್ಷಮತೆ ಮತ್ತು ಸಾಮರ್ಥ್ಯ ಪಕ್ಷದ ಕಾರ್ಯಕರ್ತರಲ್ಲಿದೆ. ಈ ಹಿನ್ನೆಲೆಯಲ್ಲಿ ಪ್ರತೀ ಬೂತ್ ಮಟ್ಟದಲ್ಲಿ ಸದೃಢ ಪಕ್ಷ ಸಂಘಟನೆಯ ಮೂಲಕ ಮುಂಬರಲಿರುವ ತಾ.ಪಂ., ಜಿ.ಪಂ. ಹಾಗೂ ಲೋಕಸಭಾ ಚುನಾವಣೆಯಲ್ಲಿ ಮಗದೊಮ್ಮೆ ಉಡುಪಿ ಜಿಲ್ಲೆ ನಿರಂತರ ಗೆಲುವಿನ ಜಿಲ್ಲೆ ಎಂಬ ಹೆಗ್ಗಳಿಕೆಯನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಸಂಘಟಿತರಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಶಾಸಕ ಕೆ.ರಘುಪತಿ ಭಟ್, ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್, ಶ್ರೀಶ ನಾಯಕ್ ಪೆರ್ಣಂಕಿಲ, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ, ಉಡುಪಿ ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶ ಭಟ್ ಕೊಡವೂರು, ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಜಗದೀಶ್ ಆಚಾರ್ಯ ಕಪ್ಪೆಟ್ಟು ಉಪಸ್ಥಿತರಿದ್ದರು