ಮಂಗಳೂರು : ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಾಕಷ್ಟು ಹೊಸ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸಿದ ಹಿನ್ನೆಲೆಯಲ್ಲಿ ಪ್ರಸ್ತುತ ವಾಸನೆಯುಕ್ತ ಪರಿಸರ ಕಡಿಮೆಯಾಗಿದೆ. ಸ್ವಚ್ಛ ಭಾರತ್ ಅಭಿಯಾನಡಿ ದೊರೆಯುವ ಅನುದಾನಗಳನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಲಾಗುತ್ತಿದೆ. ಆ ಮೂಲಕ ಸ್ವಚ್ಛ ಮಂಗಳೂರು ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಎಲ್ಲ ವ್ಯವಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಮೇಯರ್ ಹೇಳಿದರು.
ದಿನಕ್ಕೆ 350 ಮೆಟ್ರಿಕ್ ಟನ್ ಹಸಿ ತ್ಯಾಜ್ಯ, ವಾರಕ್ಕೆ ಮೂರು ಬಾರಿ 180 ಮೆಟ್ರಿಕ್ ಟನ್ ಒಣ ಕಸ ಪೂರೈಕೆಯಾಗುತ್ತದೆ. ಹಸಿ ಕಸವನ್ನು ವ್ಯವಸ್ಥಿತವಾಗಿ ಕಪ್ಪು ತಲೆ ಸೈನಿಕ ಹುಳುಗಳ ಮೂಲಕ ಗೊಬ್ಬರವಾಗಿ ಪರಿವರ್ತಿಸಿ ಮಾರಾಟ ಮಾಡುವ ವ್ಯವಸ್ಥೆಯನ್ನು ಅನುಸರಿಸಲಾಗುತ್ತಿದೆ. ಕೆ.ಜಿ.ಗೆ 1.00 ರೂ.ನಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಒಣ ಕಸವನ್ನು ವಿವಿಧ ವಿಭಾಗಗಳಲ್ಲಿ ಪ್ರತ್ಯೇಕಿ ಬೇರೆ ಬೇರೆ ಘಟಕಗಳಿಗೆ ವಿಲೇವಾರಿ ಮಾಡುವ ವ್ಯವಸ್ಥೆಯನ್ನೂ ಅನುಸರಿಸಿಕೊಂಡು ಬರಲಾಗುತ್ತಿದೆ.
ಬೇಸಗೆಯಲ್ಲಿ ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಸ್ಥಳಕ್ಕೆ ಬೆಂಕಿ ಬೀಳುವುದನ್ನು ತಡೆಯುವ ನಿಟ್ಟಿನಲ್ಲಿ 2 ಬೋರ್‌ವೆಲ್‌ಗಳನ್ನು ಕೊರೆಯಲಾಗಿದೆ. ಸುಮಾರು 5.5 ಇಂಚಿನಷ್ಟು ನೀರಿದ್ದು, ಸ್ರ್ಪಿಂಕ್ಲರ್ ಮತ್ತು ಪೈಪ್‌ಲೈನ್ ಅಳವಡಿಕೆ ಕೆಲಸ ಆಗಿದೆ. ಮುಂದಕ್ಕೆ ಬೆಂಕಿ ಅನಾಹುತಗಳು ಸಂಭವಿಸದಂತೆ ತಡೆಯುವ ನಿಟ್ಟಿನಲ್ಲಿ ಹಸಿ ತ್ಯಾಜ್ಯವನ್ನು ವಿಲೇವಾರಿ ಮಾಡುವ ಘಟಕದ ಸುತ್ತಲೂ ಪೈಪ್‌ಲೈನ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸುಽರ್ ಶೆಟ್ಟಿ ತಿಳಿಸಿದರು.
ಒಣ ಕಸವನ್ನು ಸ್ಥಳೀಯವಾಗಿಯೇ ಸಮರ್ಪಕ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಪ್ರಸ್ತುತ ಎಸ್‌ಟಿಪಿಗಳು ಇರುವಲ್ಲಿ ಘಟಕಗಳನ್ನು ನಿರ್ಮಿಸಲಾಗಿದ್ದು, ಬಜಾಲ್ ಎಸ್‌ಟಿಪಿಯಲ್ಲಿ ಸುರತ್ಕಲ್‌ನ ಮಾಧವನಗರ ಎಸ್‌ಟಿಪಿ ಘಟಕ ನಿರ್ಮಾಣ ಮಾಡಲಾಗಿದೆ ಎಂದರು ಅಧಿಕಾರಿಗಳು ತಿಳಿಸಿದರು.
ಪಾಲಿಕೆ ಉಪಮೇಯರ್ ಸುನೀತಾ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಭರತ್ ಕುಮಾರ್ ಎಸ್., ಮಾಜಿ ಮೇಯರ್ ಭಾಸ್ಕರ್ ಕೆ., ಮನಪಾ ಸದಸ್ಯೆ ಸಂಗೀತಾ ನಾಯಕ್, ಪಾಲಿಕೆ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು