ಬೈಂದೂರು: ಬೈಂದೂರು ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧ ಪಟ್ಟಂತೆ ಅನುಷ್ಠಾನಗೊಂಡಿರುವ ಹಾಗೂ ಅನುಷ್ಠಾನ ಗೊಳ್ಳುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳ ಪ್ರಗತಿ ಬಗ್ಗೆ ಜಿಲ್ಲಾ ಕೇಂದ್ರದಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಅವರು ಸಭೆ ನಡೆಸಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಪ್ರಸ್ತುತ ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ರಾಜ್ಯ ಸರಕಾರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಯೋಜನೆಗಳು ಅನುಷ್ಠಾನ ಗೊಳ್ಳುತ್ತಿಲ್ಲ. ಆದರೂ ಈಗಾಗಲೇ ಕೇಂದ್ರದಿಂದ ಹಾಗೂ ಕೇಂದ್ರ ಪುರಸ್ಕೃತ ಯೋಜನೆ ಗಳು ಹಲವು ವರ್ಷಗಳಿಂದ ಅನುಷ್ಠಾನ ವಿಳಂಬವಾಗುತ್ತಿದೆ ಇದರ ಅನುಷ್ಠಾನಕ್ಕೆ ವೇಗ ನೀಡುವ ಸಲುವಾಗಿ ನಿರಂತರವಾಗಿ ಕ್ಷೇತ್ರ ಭೇಟಿ ಮಾಡಿ ಯೋಜನೆಗಳ ಪ್ರಗತಿ ಬಗ್ಗೆ ಕೆಳ ಹಂತದ ಅಧಿಕಾರಿಗಳಲ್ಲಿ ವಿಚಾರಿಸುವುದು ಹಾಗೂ ಈಗಾಗಲೇ ಅನುಷ್ಠಾನ ಗೊಂಡಿರುವ ಅಭಿವೃದ್ಧಿ ಯೋಜನೆ ಗಳು ಜನರಿಗೆ ದೊರಕುತ್ತಿರುವ ಬಗ್ಗೆ ಆಯಾಯ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾಳಜಿ ವಹಿಸಬೇಕು. ಕೇಂದ್ರ ಪುರಸ್ಕೃತ ಅಥವಾ ರಾಜ್ಯದ ಯಾವುದೇ ಜನೋಪಯೋಗಿ ಯೋಜನೆ ಅನುಷ್ಠಾನದಲ್ಲಿ ಕ್ಷೇತ್ರವು ಹಿಂದೆ ಬೀಳಬಾರದು. ಈ ಬಗ್ಗೆ ಅಧಿಕಾರಿಗಳು ಅಗತ್ಯ ಎಚ್ಚರಿಕೆ ವಹಿಸಬೇಕು. ಅನುಷ್ಠಾನ ಲೋಪವೂ ಆಗಬಾರದು. ನಿರ್ದಿಷ್ಟ ಕಾಲಮಿತಿಯಲ್ಲಿ ಯೋಜನೆ ಜಾರಿ ಆಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಕರ್ನಾಟಕ ನೀರಾವರಿ ಅಭಿವೃದ್ಧಿ ನಿಗಮ ವಾರಾಹಿ ಯೋಜನೆ ಕಾರ್ಯ ಪಾಲಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಇಂಜಿನಿಯರ್, ಬಂದರು ಹಾಗೂ ಒಳ ನಾಡು ಜಲ ಸಾರಿಗೆ ಇಲಾಖೆ ಕಾರ್ಯ ನಿರ್ವಾಹಕ ಇಂಜಿನಿಯರ್, ಕೆ. ಆರ್. ಐ.ಡಿ. ಎಲ್ ಕಾರ್ಯ ನಿರ್ವಾಹಕ ಇಂಜಿನಿಯರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

