ಕುಂದಾಪುರ : ಮುಜರಾಯಿ ಇಲಾಖೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಾಗಿರುವ ಕೊಲ್ಲೂರು ಹಾಗೂ ಕುಕ್ಕೆ ಸುಬ್ರಮಣ್ಯ ಕ್ಷೇತ್ರಗಳಲ್ಲಿಯೂ ಅಭಿವೃದ್ದಿ ಪ್ರಾಧಿಕಾರ ರಚನೆಯ ಪ್ರಸ್ತಾಪ ಇಲಾಖೆಯ ಮುಂದಿದೆ ಎಂದು ರಾಜ್ಯದ ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ
ಮಂಗಳವಾರ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದ ಸಚಿವರು ನಂತರ ದೇವಳದ ಪ್ರಮುಖರ ಸಭೆಯಲ್ಲಿ ಮಾತನಾಡಿದರು.
ಮಲೆಮಹದೇಶ್ವರ ಬೆಟ್ಟ, ಮೈಸೂರಿನ ಚಾಮುಂಡಿ ಬೆಟ್ಟ, ರೇಣುಕಾ ಎಲ್ಲಮ್ಮ, ಹುಲಿಯಮ್ಮ ದೇವಸ್ಥಾನ, ಘಾಟಿ ಸುಬ್ರಮಣ್ಯ ಕ್ಷೇತ್ರಗಳ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡಲಾಗಿದೆ. ಅದೇ ರೀತಿ ಕೊಲ್ಲೂರು ಹಾಗೂ ಕುಕ್ಕೆ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಕೆಲವು ಸಮಸ್ಯೆಗಳಿದ್ದು, ಈ ಬಗ್ಗೆ ಜುಲೈನಲ್ಲಿ ವ್ಯವಸ್ಥಾಪನಾ ಸಮಿತಿ, ಶಾಸಕರು, ಮಾಜಿ ಶಾಸಕರು, ಅಧಿಕಾರಿಗಳನ್ನು ಬೆಂಗಳೂರಿಗೆ ಕರೆದು ಸಭೆ ನಡೆಸುತ್ತೇನೆ. ದೇಗುಲದ ಜಮೀನು ಪರಭಾರೆ, ಒತ್ತುವರಿಯಾಗಿದೆ, ಇದನ್ನು ತೆರವುಗೊಳಿಸುವ ಕುರಿತು ಸರ್ಕಾರ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದೆ
ಇಲ್ಲಿನ ಪಾರ್ಕಿಂಗ್ ಅವ್ಯವಸ್ಥೆ, ಒಳಚರಂಡಿ ಅವ್ಯವಸ್ಥೆಗಳ ಬಗ್ಗೆಯೂ ಬೆಂಗಳೂರಿನಲ್ಲಿ ಚರ್ಚಿಸಲಾಗುತ್ತದೆ. ದೇಗುಲದ ಅಭಿವೃದ್ಧಿಗೆ ಬೇಕಾದಷ್ಟು ಭೂಮಿಯ ಬಗ್ಗೆ ಕಂದಾಯ ಇಲಾಖೆಯ ಸಚಿವರೊಂದಿಗೆ ಮಾತನಾಡುತ್ತೇನೆ. ಇತರ ಕಾನೂನು ಕಾನೂನು ಹೋರಾಟಗಳಿಗೆ ಸರ್ಕಾರದ ಹೆಚ್ಚುವರಿ ಅಡ್ಡಕೇಟ್ ಜನರಲ್ ಅವರ ಸಲಹೆ ಪಡೆಯಲಾಗುವುದು ಎಂದರು
ಈ ಸಂದರ್ಭದಲ್ಲಿ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಘುರಾಮ ದೇವಾಡಿಗ ಆಲೂರು, ಮಹಾಲಿಂಗ ನಾಯ್ಕ, ಕೆ.ಸುಧಾ ಬೈಂದೂರು, ಮಾಜಿ ಸಚಿವ ಅಭಯಚಂದ್ರ ಜೈನ್, ರಾಜ್ಯ ಧಾರ್ಮಿಕ ಪರಿಷತ್ ಮಲ್ಲಿಕಾ ಪಕ್ಕಳಾ ಬಂಟ್ವಾಳ, ಉದ್ಯಮಿ ಶಂಕರ ಶೆಟ್ಟಿ ಬೆಂಗಳೂರು, ಪ್ರಮುಖರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಉದಯ್ ಕುಮಾರ ಶೆಟ್ಟಿ ಮುನಿಯಾಲ್, ರಾಜು ಎಸ್ ಪೂಜಾರಿ, ಎಸ್.ಪ್ರಕಾಶ್ಚಂದ್ರ ಶೆಟ್ಟಿ ಕಂಬದಕೋಣೆ, ಪ್ರದೀಪ್‌ಕುಮಾರ ಶೆಟ್ಟಿ ಗುಡಿಬೆಟ್ಟು, ಅರವಿಂದ್ ಪೂಜಾರಿ ಪಡುಕೋಣೆ, ಕಿರಣ್ ಹೆಗ್ಡೆ ಅಂಪಾರು. ಮೋಹನ್ ಪೂಜಾರಿ ಉಪ್ಪುಂದ, ಅಣ್ಣಪ್ಪ ಶೆಟ್ಟಿ ಕಾಲೋಡು, ದೇವಾಡಿಗ ಇದ್ದರು.

