Home » ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ
 

ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ

ಗುರುರಾಜ್‌ ಗಂಟಿಹೊಳೆ

by Kundapur Xpress
Spread the love

ಬೈಂದೂರು : ಶಾಸಕ ಗುರುರಾಜ್‌ ಗಂಟಿಹೊಳೆ ಅವರು   ಉಪ್ಪುಂದದ ಕಾರ್ಯಕರ್ತ ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಬಂಧಿತ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು.ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಗ್ರಾಮ ಪಂಚಾಯತ್ ಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಶಾಸಕರು ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಕುಡಿಯುವ ನೀರಿಗೆ ಸಂಬಂಧಿಸಿದಂತೆ ಹೆದ್ದಾರಿ ಪ್ರಾಧಿಕಾರದಿಂದ ಸಮಸ್ಯೆಗಳಾಗುತ್ತಿದ್ದಲ್ಲಿ ಯಾವುದೇ ಕಾಲಮಿತಿಯಿಲ್ಲದೆ ತುರ್ತಾಗಿ ಸಮಸ್ಯೆ ನಿವಾರಣೆಗೆ ಗಮನ ಹರಿಸುವುದು, ಮಳೆಗಾಲದಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳಿದ್ದಲ್ಲಿ ಮಳೆಗಾಲ ಮುಂಚಿತವಾಗಿ ಸರಿಪಡಿಸಲು ಮತ್ತು ಕ್ರಮವಹಿಸಲು ಸೂಚನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಪಂಚಾಯತ್ ಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಸಮರ್ಪಕ ಚರಂಡಿ ವ್ಯವಸ್ಥೆ ಇದ್ದು ಅದನ್ನು ಸರಿಪಡಿಸಲು, ಅಸಮರ್ಪಕ ಚರಂಡಿ ವ್ಯವಸ್ಥೆಯಿಂದಾಗಿ ಮಳೆಗಾಲದಲ್ಲಿ ವಿಪರೀತ ಮಳೆಯಾಗುವ ಸಂದರ್ಭ ಕೃತಕ ನೆರೆ ಉಂಟಾಗುವ ಪರಿಸ್ಥಿತಿ ಉಂಟಾಗುವ ದೂರುಗಳಿದ್ದು, ಇದನ್ನು ಬಗೆಹರಿಸಬೇಕೆಂದರು.

ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರಿತವಾಗುವ ಕಾರಣ ಹೆದ್ದಾರಿ ಪಕ್ಕ ಅಳವಡಿಸಲಾಗಿರುವ ಕುಡಿಯುವ ನೀರಿನ ಪೈಪ್ ಲೈನ್ ಗಳಿಗೆ ತೊಂದರೆ ಆಗದಂತೆ ಹೆದ್ದಾರಿ ಪ್ರಾಧಿಕಾರವು ಅಗತ್ಯ ಗಮನ ಹರಿಸಲು ಸೂಚಿಸಿದರು ಮತ್ತು ಕೇಂದ್ರ ಸರಕಾರದ ಜಲ ಜೀವನ್ ಮಿಷನ್ ಯೋಜನೆಯಡಿ ಪೈಪ್ ಲೈನ್ ಅಳವಡಿಕೆ ಹಾಗೂ ಕುಡಿಯುವ ನೀರಿನ ವಿತರಣಾ ಜಾಲಕ್ಕೆ ಸಂಪರ್ಕ ಕಲ್ಪಿಸುವ ಕಾಮಗಾರಿಗಳು ನಡೆಯುತ್ತಿರುವುದರಿಂದ ಹೆದ್ದಾರಿ ಪ್ರಾಧಿಕಾರವು ಸಂಬಂಧಿಸಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮವಹಿಸಲು ಮೌಖಿಕ ಸೂಚನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಳವಡಿಸಲಾಗಿರುವ ಬೀದಿ ದೀಪಗಳು ನಿಯಮಿತವಾಗಿ ಉರಿಯುತ್ತಿಲ್ಲ ಎಂಬ ಬಗ್ಗೆ ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಬರುತ್ತಿದ್ದು, ಹಾಗಾಗಿ ಹೆದ್ದಾರಿ ಪ್ರಾಧಿಕಾರವು ಈ ಬಗ್ಗೆ ನಿಗಾ ವಹಿಸಬೇಕು, ಸಾರ್ವಜನಿಕರಿಂದ ದೂರುಗಳು ಶಾಸಕರ ಕಚೇರಿಗೆ ಬರುವವರೆಗೆ ಕಾಯದೇ ಹೆದ್ದಾರಿಯಲ್ಲಿ ಅಳವಡಿಸಲಾಗಿರುವ ದಾರಿ ದೀಪಗಳು ಯಾವುದೇ ಅಡೆ ತಡೆಗಳಿಲ್ಲದೇ ನಿರಂತರವಾಗಿ ಉರಿಯುವಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮರವಂತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ದೀಪಗಳು ಉರಿಯುತ್ತಿಲ್ಲ ಎಂಬ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದ್ದು ಕೂಡಲೇ ಈ ಸಮಸ್ಯೆ ಬಗೆಹರಿಸಬೇಕು ಎಂದು ಸೂಚಿಸಿದರು

   

Related Articles

error: Content is protected !!