Home » ತನ್ನನ್ನು ಹೊತ್ತುಕೊಂಡು ಹೋಗಿದ್ದರು : ದಿಗಂತ್
 

ತನ್ನನ್ನು ಹೊತ್ತುಕೊಂಡು ಹೋಗಿದ್ದರು : ದಿಗಂತ್

by Kundapur Xpress
Spread the love

ಉಡುಪಿ : ಹಲವು ಅನುಮಾನಗಳಿಗೆ ಕಾರಣವಾಗಿದ್ದ ಫರಂಗಿಪೇಟೆ ಕಿದೆಬೆಟ್ಟು ಪದ್ಮನಾಭ ಅವರ ಪುತ್ರ ಅಪ್ರಾಪ್ತ ಬಾಲಕ ದಿಗಂತ್ ನಾಪತ್ತೆ ಪ್ರಕರಣ ಕೊನೆಗೂ ಶನಿವಾರ ಆತನ ಪತ್ತೆಯೊಂದಿಗೆ ಸುಖಾಂತ್ಯ ಕಂಡಿದ್ದು ತನ್ನನ್ನು ಯಾರೋ ಹೊತ್ತುಕೊಂಡು ಹೋಗಿದ್ದರು ಎಂದು ಬಾಲಕ ತನ್ನ ತಾಯಿಗೆ ತಿಳಿಸಿದ್ದಾನೆ

ಫೆ.25ರಂದು ಮನೆ ಸಮೀಪದ ರೈಲ್ವೆ ಹಳಿಯಿಂದ ನಿಗೂಢ ರೀತಿಯಲ್ಲಿ ದಿಗಂತ್‌ ನಾಪತ್ತೆಯಾಗಿದ್ದ, ಆ ಬಳಿಕ ಕಳೆದ 12 ದಿನಗಳಿಂದನಿರಂತರವಾಗಿ ಪೊಲೀಸ್‌ ಕಾರ್ಯಾಚರಣೆ ನಡೆದಿತ್ತು. ಇದೀಗ ಆತ ಪತ್ತೆಯಾಗಿದ್ದು ಪೊಲೀಸ್ ಇಲಾಖೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

ಜಿಲ್ಲೆ ಬಿಟ್ಟು ಹೊರ ಜಿಲ್ಲೆಗೆ ದಿಗಂತ್ ಹೋಗಿರಬಹುದು ಎಂದು ಊಹಾಪೋಹಗಳು ಎಬ್ಬಿತ್ತಾದರೂ ಕರಾವಳಿ ಭಾಗದಲ್ಲಿಯೇ ಈತನ ಪತ್ತೆಯಾಗಿರುವುದು ಮತ್ತೆ ಅನುಮಾನಗಳಿಗೆ ಕಾರಣವಾಗಿದೆ.

ಉಡುಪಿಯ ಡಿಮಾರ್ಟ್ ಮಳಿಗೆಯಲ್ಲಿ ಖರೀದಿಗೆ ದಿಗಂತ್ ಬಂದಿದ್ದಾಗ ಆತನನ್ನು ನೋಡಿದ ವ್ಯಕ್ತಿಯೋರ್ವರು ಗುರುತು ಹಿಡಿದಿದ್ದಾರೆ ಎಂದು ಹೇಳಲಾಗಿದೆ. ಬಳಿಕ ಮನೆಯವರಿಗೆ ಆತ ಅಲ್ಲಿನ ವ್ಯಕ್ತಿಯೋರ್ವರ ಮೊಬೈಲ್ ಮೂಲಕ ಫೋನ್ ಕಾಲ್ ಕೂಡ ಮಾಡಿರುವ ಬಗ್ಗೆ ತಿಳಿದು ಬಂದಿದೆ.

ಉಡುಪಿ ಬಿಜೆಪಿ ಪ್ರಮುಖರೋರ್ವರ ಮಗನಿಗೆ ದಿಗಂತ್ ಕಾಣಸಿಕ್ಕಿದ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಅವರು ದ.ಕ. ಜಿಲ್ಲೆಯ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ಬಳಿಕ ಪೊಲೀಸ್ ತಂಡಕ್ಕೆ ಹಾಗೂ ಹಿಂದೂ ಸಂಘಟನೆಯ ಪ್ರಮುಖರಲ್ಲಿ ಮಾಹಿತಿ ಹಂಚಿಕೊಂಡಿದ್ದು, ದಿಗಂತ್‌ ಪತ್ತೆಯಾದ ಉಡುಪಿಯ ಡಿಮಾರ್ಟ್‌ಗೆ ತೆರಳಿ ಅಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ್ದಾರೆ.

ಫರಂಗಿಪೇಟೆಯ ದಿಗಂತ್ ಮನೆಯಲ್ಲಿ ಸಂತಸದ ವಾತಾವರಣ ಮೂಡಿದೆ. ಸತತ ಕಾರ್ಯಾಚರಣೆ ಬಳಿಕ ದಿಗಂತ್‌ನನ್ನು ಪತ್ತೆ ಹಚ್ಚಿದ ಪೊಲೀಸರ ಮುಖದಲ್ಲಿಯೂ ಸಂತಸದ ಛಾಯೆ ಕಾಣಿಸಿದೆ.

 

Related Articles

error: Content is protected !!