ಉಡುಪಿ: ಶಾಸಕ ಶ್ರೀ ಕೆ. ರಘುಪತಿ ಭಟ್ ಅವರ ಮಹತ್ವಾಕಾಂಕ್ಷೆಯ ಯೋಜನೆ, ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ “ಸರ್ವರಿಗೂ ಸೂರು ಕಾರ್ಯಕ್ರಮ” ದಡಿ ಉಡುಪಿ ನಗರಸಭಾ ವ್ಯಾಪ್ತಿಯ ಫಲಾನುಭವಿಗಳಿಗೆ ಹೆರ್ಗ ಗ್ರಾಮದ ಬಬ್ಬುಸ್ವಾಮಿ ಲೇಔಟ್ ನಲ್ಲಿ G+3 ಮಾದರಿಯಲ್ಲಿ 460 ಮನೆಗಳನ್ನು ಒಳಗೊಂಡ ವಸತಿ ಸಮುಚ್ಛಯ ನಿರ್ಮಿಸಲಾಗುತ್ತಿದ್ದು, ಮೊದಲ ಹಂತದಲ್ಲಿ 240 ಮನೆಗಳ ಫಲಾನುಭವಿಗಳಿಗೆ ಹಕ್ಕುಪತ್ರವನ್ನು ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ವಿತರಿಸಿದರು.
ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ವಾಸವಿರುವ ನಿರಾಶ್ರಿತರಿಗೆ ಮಾತ್ರ ಈ ಯೋಜನೆಯಲ್ಲಿ ಮನೆಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಒಂದು ಮನೆಗೆ ರೂ. 7,42,994.00/- ವೆಚ್ಚವಾಗುತ್ತಿದ್ದು, ಇದರಲ್ಲಿ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ರೂ. 1,50,000/-, ರಾಜ್ಯ ಸರ್ಕಾರ ರೂ. 1,20,000.00/- ನಗರ ಸಭೆಯ ಯೋಜನಾ ವೆಚ್ಚದಡಿ ಶೇಕಡಾ 10 ರಷ್ಟು ಅಂದರೆ ರೂ. 74,299.00/- ಮೊತ್ತವನ್ನು ಸಹಾಯ ಧನದ ರೂಪದಲ್ಲಿ ನೀಡಲಾಗುತ್ತಿದೆ. ಫಲಾನುಭವಿಯು ವಂತಿಗೆ ರೂಪದಲ್ಲಿ ರೂ. 90,000.00/- ಮೊತ್ತದ ಡಿಡಿ ಮಾಡಿ ಪಾವತಿಸಬೇಕು. ಉಳಿದ ಮೊತ್ತ ರೂ. 3,08,695.00/- ಬ್ಯಾಂಕ್ ಸಾಲವಾಗಿ ನೀಡುತ್ತಿದ್ದು, ತಿಂಗಳ ಕಂತಿನಂತೆ ಪಾವತಿಸುವ ಅನುಕೂಲ ಕಲ್ಪಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕೇಂದ್ರ ಸರ್ಕಾರ ರೂ. 1,50,000/-, ರಾಜ್ಯ ಸರ್ಕಾರ ರೂ. 2,00,000/-, ನಗರ ಸಭೆಯ ಯೋಜನಾ ವೆಚ್ಚದಡಿ ಶೇಕಡಾ 10 ರಷ್ಟು ಅಂದರೆ ರೂ. 74,299/- ಮೊತ್ತವನ್ನು ಸಹಾಯ ಧನದ ರೂಪದಲ್ಲಿ ನೀಡಲಾಗುತ್ತಿದೆ. ಫಲಾನುಭವಿಯು ವಂತಿಗೆ ರೂಪದಲ್ಲಿ ರೂ. 60,000.00/- ಮೊತ್ತದ ಡಿಡಿ ಮಾಡಿ ಪಾವತಿಸಬೇಕು. ಉಳಿದ ಮೊತ್ತ ರೂ. 2,58,695/- ಬ್ಯಾಂಕ್ ಸಾಲವಾಗಿ ನೀಡುತ್ತಿದ್ದು, ತಿಂಗಳ ಕಂತಿನಂತೆ ಪಾವತಿಸುವ ಅನುಕೂಲ ಕಲ್ಪಿಸಲಾಗಿದೆ. ಮನೆಗಾಗಿ ಅರ್ಜಿ ಹಾಕಿ ಆಯ್ಕೆಯಾದ ಫಲಾನುಭವಿಗಳಿಗೆ ಶಾಸಕ ಶ್ರೀ ಕೆ ರಘುಪತಿ ಭಟ್ ಅವರ ಉಪಸ್ಥಿತಿಯಲ್ಲಿ ಚೀಟಿ ಎತ್ತುವ ಪ್ರಕ್ರಿಯೆ ಮೂಲಕ ಮನೆ ಹಂಚಿಕೆ ಮಾಡಲಾಗಿದೆ.ಈ ಸಂದರ್ಭದಲ್ಲಿ ಉಡುಪಿ ನಗರ ಸಭೆಯ ಅಧ್ಯಕ್ಷರಾದ ಸುಮಿತ್ರಾ ಆರ್ ನಾಯಕ್, ಉಪಾಧ್ಯಕ್ಷರಾದ ಲಕ್ಷ್ಮೀ ಮಂಜುನಾಥ ಕೊಳ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಶ ಕೊಡವೂರು, ಸ್ಥಳೀಯ ನಗರಸಭಾ ಸದಸ್ಯರಾದ ವಿಜಯಲಕ್ಷ್ಮಿ, ನಗರ ಆಶ್ರಯ ಸಮಿತಿ ಸದಸ್ಯರಾದ ಮುರಳಿ ಭಟ್, ಡೆನ್ನಿಸ್, ನಗರ ಸಭೆಯ ಪೌರಾಯುಕ್ತರಾದ ಆರ್.ಪಿ ನಾಯ್ಕ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪ್ರಸನ್ನ ಕುಮಾರ್, ಬ್ಯಾಂಕ್ ಆಫ್ ಬರೋಡಾ ಮಣಿಪಾಲ ಶಾಖೆಯ ಪ್ರಬಂಧಕರಾದ ಕಮಲೇಶ್, ನಗರ ಸಭೆಯ ಸದಸ್ಯರು, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.