Home » ಶಾಸಕರಿಂದ ಸಿಹಿ ನೀರಿನ ಡ್ಯಾಮ್ ಪರಿಶೀಲನೆ
 

ಶಾಸಕರಿಂದ ಸಿಹಿ ನೀರಿನ ಡ್ಯಾಮ್ ಪರಿಶೀಲನೆ

ಶಾಸಕ ಕಿರಣ್ ಕುಮಾರ್ ಕೊಡ್ಗಿ

by Kundapur Xpress
Spread the love

ಕೋಟ : ಇಲ್ಲಿನ ಸಾಸ್ತಾನದ ಪಾಂಡೇಶ್ವರ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 350 ಕೋಟಿ ರೂ ವೆಚ್ಚದಲ್ಲಿ ಬೆಣ್ಣೆಕುದ್ರು ಸೀತಾನದಿಗೆ ಅಡ್ಡಲಾಗಿ ಸಿಹಿ ನೀರಿಗಾಗಿ ನಿರ್ಮಾಣಗೊಳ್ಳುತ್ತಿರುವ ಡ್ಯಾಮ್ ಪ್ರದೇಶಕ್ಕೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸೋಮವಾರ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಪರಿಶೀಲಿಸಿದರು.
ಈ ವೇಳೆ ಪಾಂಡೇಶ್ವರ ಗ್ರಾಮಪಂಚಾಯತ್ ಉಪಾಧ್ಯಕ್ಷ ವೈ.ಬಿ ರಾಘವೇಂದ್ರ ಶಾಸಕರ ಸಮ್ಮುಖದಲ್ಲಿ ನೀರಾವರಿ ಇಲಾಖೆಯನ್ನು ತರಾಟೆ ತೆಗೆದುಕೊಂಡು ಈ ಯೋಜನೆಯ ಬಗ್ಗೆ ಪ್ರಾರಂಭದಲ್ಲಿ ಸ್ಥಳೀಯಾಡಳಿತ ಗ್ರಾಮಸಭೆಯ ಮೂಲಕ ಆಕ್ಷೇಪಣೆ ಸಲ್ಲಿಸಿ ಪತ್ರದ ಮೂಲಕ ಮಾಹಿತಿ ರವಾನಿಸಿದೆ ಆದರೆ ಅದರ ನೀಲನಕ್ಷೆ ಅಥವಾ ಸಮರ್ಪಕ ಮಾಹಿತಿ ನೀಡದೆ ಯೋಜನೆಯನ್ನು ತರಾತುರಿ ಆರಂಭಿಸಲಾಗಿದೆ ಇದರಿಂದ ಗ್ರಾಮದಲ್ಲಿ ಕೃತಕ ನೆರೆ ಭೀತಿ ಜನಸಾಮಾನ್ಯರಲ್ಲಿ ವ್ಯಕ್ತವಾಗಿದೆ ಹಾಗಾದರೆ ಗ್ರಾಮಪಂಚಾಯತ್ ನಿರ್ಣಯಕ್ಕೆ ಬೆಲೆಯೇ ಇಲ್ಲವಾ ಯಾಕಿ ಧೋರಣೆ ಎಂದು ಪ್ರಶ್ನಿಸಿದರು.

ಈ ಬಗ್ಗೆ ಪಂಚಾಯತ್ ಪ್ರತಿನಿಧಿ ಪ್ರತಾಪ್ ಶೆಟ್ಟಿ ಸಹಿತ ಗ್ರಾಮಸ್ಥರು ಶಾಸಕರಿಗೆ ಮಾಹಿತಿ ನೀಡಿ ಈ ರೀತಿಯ ಯೋಜನೆಯಿಂದ ಗ್ರಾಮಕ್ಕೆ ಎಷ್ಟು ಲಾಭ ಇದೆಯೋ ಅಷ್ಟೆ ಪ್ರಮಾಣದಲ್ಲಿ ಹಾನಿ ಎದುರಾಗುವ ಭೀತಿ ಎದುರಾಗಿದೆ ಗ್ರಾಮಕ್ಕೆ ಭದ್ರತೆ ನೀಡದೆ ಈ ಯೋಜನೆ ಎಷ್ಟು ಸರಿ,ಉಪ್ಪು ನೀರು ಅಥವಾ ಮಳೆಗಾಲದಲ್ಲಿ ನೆರೆಯ ನುಗ್ಗುವ ಭೀತಿ ಎದುರಾಗಿದ್ದು ಇದಕ್ಕಾಗಿ ಬೆಣ್ಣೆಕುದ್ರು ಭಾಗಗಕ್ಕೆ ಅಳವಡಿಸಲಾದ ತಡೆದಂಡೆಯನ್ನು ನಮ್ಮ ಈ ಭಾಗದಲ್ಲಿ ಪೂರ್ಣಪ್ರಮಾಣದಲ್ಲಿ ಅಳವಡಿಸಿ ಗ್ರಾಮದ ಕೃಷಿ ಭೂಮಿಗೆ ನೀರು ನುಗ್ಗದಂತೆ ಪರಿಸರದಲ್ಲಿ ನೀರು ಸರಾಗವಾಗಿ ನದಿಗೆ ತಲುಪುವಂತೆ ಮಾಡಿ ಎಂದು ಶಾಸಕರಿಗೆ ಮತ್ತು ಗುತ್ತಿಗೆದಾರರಿಗೆ ಮನವರಿಕೆ ಮಾಡಿದರು.

ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ವಾಂಟೆಡ್ ಡ್ಯಾಮ್ ನಿಂದ ಗ್ರಾಮಕ್ಕೆ ಯಾವುದೇ ರೀತಿಯ ಸಮಸ್ಯೆ ಯಾಗದಂತೆ ಹಾಗೂ ಸೂಲ್ ಕುದ್ರು ,ಮಾಬುಕಳ ಸೇತುವೆಯವರೆಗೆ ತಡೆದಂಡೆ ನಿರ್ಮಿಸಲು ಬೇಕಾದ ಯೋಜನೆ ಶೀಘ್ರ ಅನುಷ್ಠಾನಗೊಳಿಸಿ ಹಾಗೇ ಯೋಜನೆಯ ಬಗ್ಗೆ ಗ್ರಾಮಪಂಚಾಯತ್ ಸಮರ್ಪಕ ಮಾಹಿತಿ ನೀಡಿ ಎಂದು ಸಣ್ಣನೀರಾವರಿ ಇಲಾಖೆ ಹಾಗೂ ಗುತ್ತಿಗೆದಾರರಿಗೆ ಖಡಕ್ ಸೂಚನೆಯನ್ನು ಶಾಸಕ ಕಿರಣ್ ಕುಮಾರ್ ಕೊಡ್ಗಿ ನೀಡಿದರು.

ಗುತ್ತಿಗೆದಾರ ಕಂಪನಿಯ ಪರವಾಗಿ ಗುರುಮೂರ್ತಿ ಮಾತನಾಡಿ ಪ್ರಸ್ತುತ ಯೋಜನೆಯನ್ನು ಕರಾರುವಕ್ಕಾಗಿ ಗ್ರಾಮದ ಹಿತದೃಷ್ಠಿಯಿಂದ ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತೇವೆ ಪ್ರಸ್ತುತ ಹಾಕಿಕೊಂಡ ರೂಪುರೇಷೆಯ ಅನುಸಾರ ಡ್ಯಾಮ್ ನಿಂದ ಐದು ನೂರು ಮೀಟರ್ ತಡೆದಂಡೆ ನಿರ್ಮಿಸಲು ಸಿದ್ಧರಿದ್ದು ಅದಕ್ಕಾಗಿ ಸರ್ವೆ ನಡೆಸಿ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕಂಪನಿ ಕ್ರಮಕೈಗೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ಸಣ್ಣನೀರಾವರಿ ಇಲಾಖೆಯ ಇಂಜಿನಿಯರ್ ಅರುಣ್,ಗುತ್ತಿಗೆದಾರ ಕಂಪನಿಯ ಪರವಾಗಿ ಶಿವ ಕರ್ಕೇರ,ಪಾಂಡೇಶ್ವರ ಪಂಚಾಯತ್ ಅಧ್ಯಕ್ಷೆ ಸುಶೀಲ ಎಸ್ ಪೂಜಾರಿ,ಪಂಚಾಯತ್ ಪ್ರತಿನಿಧಿಗಳು, ಗ್ರಾಮಸ್ಥರು,ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.ಪಾಂಡೇಶ್ವರ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 350 ಕೋಟಿ ರೂ ವೆಚ್ಚದಲ್ಲಿ ಬೆಣ್ಣೆಕುದ್ರು ಸೀತಾನದಿಗೆ ಅಡ್ಡಲಾಗಿ ಸಿಹಿ ನೀರಿಗಾಗಿ ನಿರ್ಮಾಣಗೊಳ್ಳುತ್ತಿರುವ ಡ್ಯಾಮ್ ಪ್ರದೇಶಕ್ಕೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸೋಮವಾರ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಪರಿಶೀಲಿಸಿದರು.

   

Related Articles

error: Content is protected !!