ಉಧಂಪುರ: ಮುಷ್ಕರಗಳು, ಕಲ್ಲುತೂರಾಟ, ಗಡಿಯಾಚಿನ ಭಯೋತ್ಪಾದನೆ ಇತ್ಯಾದಿ ಭೀತಿ ಮುಕ್ತವಾಗಿ ಜಮ್ಮು ಕಾಶ್ಮೀರದಲ್ಲಿ ಈ ಬಾರಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿದ್ದು, ಪ್ರತ್ಯೇಕತಾವಾದಿಗಳು ಕಳೆದ ಮೂರು ದಶಕಗಳಲ್ಲಿ ನಡೆಸಿದ್ದ ಚುನಾವಣಾ ಬಹಿಷ್ಕಾರ ಅಭಿಯಾನಗಳೀಗ ಇತಿಹಾಸವಷ್ಟೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ಸುದೀರ್ಘ ಕಾಲೀನ ಸಂಕಷ್ಟಗಳಿಗೆ ಜನರಿಗೆ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಿರುವೆ ಎಂದು ಹೇಳಿದ ಪ್ರಧಾನಿ ಮೋದಿ, 2019ರ ಆಗಸ್ಟ್‌ನಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರದ್ದುಗೊಳಿಸಿರುವ ಸಂವಿಧಾನದ 370ನೇ ವಿಧಿಯನ್ನು ಸಾಮರ್ಥ್ಯವಿದ್ದರೆ ಮರಳಿ ತನ್ನಿ ಎಂದು ಕಾಂಗ್ರೆಸ್‌ಗೆ ಸವಾಲೆಸೆದರು. ನಿಮಗಿದು ಸಾಧ್ಯವಿಲ್ಲ ಒಂದು ವೇಳೆ ಈ ರೀತಿಯ ದುಸ್ಸಾಹಸಕ್ಕೆ ಕೈ ಹಾಕಿದರೆ ಮುಂದೆ ದೇಶದ ಜನತೆ ನಿಮ್ಮ ಮುಖ ಕೂಡ ನೋಡಲು ಅಸಹ್ಯಪಡುತ್ತಾರೆ ಎಂದು ಎಚ್ಚರಿಸಿದರು.