ಅಮರಾವತಿ : ಜಾರ್ಖಂಡ್ ಕಾಂಗ್ರೆಸ್ ಸಚಿವರೊಬ್ಬರ ಆಪ್ತರ ಬಳಿ 30 ಕೋಟಿ ರು. ಪತ್ತೆಯಾದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಕೂಟದ ವಿರುದ್ಧ ಹರಿತ ವಾಗ್ದಾಳಿ ನಡೆಸಿದ್ದಾರೆ. ‘ಜಾರ್ಖಂಡ್ನಲ್ಲಿ ಇಂದು ಹಣದ ಪರ್ವತವೇ ಪತ್ತೆ ಆಗಿದೆ. ಕಾಂಗ್ರೆಸ್ ಪಕ್ಷವು ಕಪ್ಪು ಹಣದ ಗೋದಾಮುಗಳನ್ನು ದೇಶದೆಲ್ಲೆಡೆ ತೆರೆದಿದೆ. ಇಂದು ಜಾರ್ಖಂಡ್ನಲ್ಲಿ ಇದು ಸಾಬೀತಾಗಿದೆ. ಈ ಬಗ್ಗೆ ಶೆಹಜಾದಾ (ರಾಹುಲ್ ಗಾಂಧಿ) ಉತ್ತರಿಸಬೇಕು’ ಎಂದು ಆಗ್ರಹಿಸಿದ್ದಾರೆ. ಒಡಿಶಾ ಹಾಗೂ ಆಂಧ್ರಪ್ರದೇಶದಲ್ಲಿ ಸೋಮವಾರ ಬಿಜೆಪಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ‘ಲೂಟಿ ತಡೆದಿದ್ದಕ್ಕಾಗಿ ನನ್ನ ಬಗ್ಗೆ ಟೀಕೆ ಮಾಡಲಾಗುತ್ತಿದೆ. ಆದರೆ ನನ್ನ ನಿಜವಾದ ಚಿಂತೆ ಬಡವರ ಹಣ ಈ ರೀತಿ ಲೂಟಿ ಆಗುತ್ತಿರುವ ಬಗ್ಗೆ’ ಎಂದು ಹೇಳಿದರು