ಹರ್ಯಾಣ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ಕಾಂಗ್ರೆಸ್ `ನಿಲುವಿನ ಬಗ್ಗೆ ಶುಕ್ರವಾರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ರಾಮನನ್ನು ಕಾಲ್ಪನಿಕ ಎಂದು ಕರೆದ, ಮಂದಿರ ನಿರ್ಮಾಣವನ್ನು ಎಂದೂ ಬಯಸದವರೂ ಈಗ ಜೈ ಶ್ರೀರಾಮ್ ಘೋಷಣೆ ಕೂಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಹರ್ಯಾಣದ ರೇವಾರಿಯಲ್ಲಿ ಅಖಿಲ ಭಾರತ -ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್) ಸ್ಥಾಪನೆ ಮತ್ತು ಹಲವಾರು ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಮೋದಿ, ತಮ್ಮ ಯುಎಇ ಮತ್ತು ಕತಾರ್ ಭೇಟಿಯನ್ನು ಉಲ್ಲೇಖಿಸಿದರು. ಮೋದಿಗೆ ಮಾತ್ರವಲ್ಲ ಪ್ರತಿಯೊಬ್ಬ ಭಾರತೀಯನಿಗೂ ಈಗ ಎಲ್ಲೆಡೆ ಗೌರವ ಇದೆ. ಭಾರತ ಇಂದು ವಿಶ್ವದಲ್ಲಿ ಹೊಸ ಎತ್ತರವನ್ನು ಮುಟ್ಟಿದೆ.ಜನರ ಆಶೀರ್ವಾದದಿಂದ ಇದು ಸಾಧ್ಯವಾಗಿದೆ ಎಂದರು.
ಜಮ್ಮು – ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವಲ್ಲಿ ದಶಕಗಳಿಂದ ಕಾಂಗ್ರೆಸ್ ಅಡೆತಡೆಗಳನ್ನು ಸೃಷ್ಟಿಸಿತ್ತು. 370ನೇ ವಿಧಿಯನ್ನು ರದ್ದುಪಡಿಸುವ ಮೂಲಕ ನಮ್ಮ ಗ್ಯಾರಂಟಿ ಈಡೇರಿಸಿದ್ದೇವೆ, ಎಂದರು. 2014 ಸಾರ್ವತ್ರಿಕ ಚುನಾವಣೆಗೆ ಪೂರ್ವಭಾವಿಯಾಗಿ ಬಿಜೆಪಿ ತನ್ನನ್ನು ತನ್ನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ನಂತರ ತನ್ನ ಮೊದಲ ಕಾರ್ಯಕ್ರಮವು ಸೆಪ್ಟೆಂಬರ್ 2013 ರಲ್ಲಿ ರೇವಾರಿಯಲ್ಲಿ ನಡೆದಿತ್ತು ಎಂದು ನೆನಪಿಸಿಕೊಂಡ ಮೋದಿ, ಜನರು ಅಂದು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಬಯಸಿದ್ದರು, ಅದು ಈಡೇರಿದೆ ಎಂದು ಹೇಳಿದರು. ಈ ಬಾರಿ ಎನ್.ಡಿ.ಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಎಂದು ಜನರು ಹೇಳುತ್ತಿದ್ದಾರೆ. ಪ್ರಜಾಪ್ರಭುತ್ತದಲ್ಲಿ ಸೀಟುಗಳು ಮುಖ್ಯ, ಆದರೆ ನನಗೆ ಜನರ ಆಶೀರ್ವಾದವೇ ದೊಡ್ಡ ಆಸ್ತಿ ಎಂದು ಮೋದಿ ನುಡಿದರು