ಕಲಬುರಗಿ: ದೇಶದ ಜನರು ಅವರ ಮಕ್ಕಳ ಮುಂದಿನ ಉಜ್ವಲ ಭವಿಷ್ಯದ ಹಿತದೃಷ್ಟಿಯಿಂದ ಸಂಪೂರ್ಣವಾಗಿ ವಿಕಸಿತ ಭಾರತದ ಸಂಕಲ್ಪದ ಪಣವನ್ನು ತೊಟ್ಟಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕಲಬುರಗಿ ನಗರದ ನೂತನ ವಿದ್ಯಾಲಯದ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಲಬುರಗಿ ಹಾಗೂ ಬೀದರ್ ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದ ಮೂಲಕ ಕಲಬುರಗಿಯಿಂದಲೇ ಲೋಕಸಭಾ ಚುನಾವಣೆ ರಣಕಹಳೆ ಮೊಳಗಿಸಿದರು ಪ್ರಧಾನಿ ಮೋದಿ.
ಕರ್ನಾಟಕ, ತಮಿಳುನಾಡು, ಕೇರಳ, ಕನ್ಯಾಕುಮಾರಿ ಎಲ್ಲಾ ಕಡೆಗಳಲ್ಲಿ ಬಿಜೆಪಿ ಪಕ್ಷದ ಪರವಾಗಿರುವ ಉತ್ಸಾಹ, ಭರವಸೆಯನ್ನು ನೋಡಿದರೆ ದೇಶದ ಜನರು ವಿಕಸಿತ ಭಾರತದ ಸಂಕಲ್ಪ ಮಾಡಿದ್ದಾರೆ ಎಂಬುದು ಸಾಬೀತಾಗಿದೆ. ಬಿಜೆಪಿ ಪರವಾಗಿರುವ ವಾತಾವರಣ ಮತ್ತು ಸಮರ್ಥನೆ ಕಂಡು ಇಂಡಿಯಾ ಒಕ್ಕೂಟ ಹಾಗೂ ಕಾಂಗ್ರೆಸ್ ತಾನಾಗಿಯೇ ಅಬ್ ಕೀ ಬಾರ್ ಚಾರಸೋ ಪಾರ್ ಎಂದು ಹೇಳುತ್ತಿದೆ ಎಂದರು. ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದಿಂದ ರಾಜ್ಯದ ಜನರು ಆಕ್ರೋಶಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಎಷ್ಟೇ ಬಣ್ಣ ಮತ್ತು ಬಟ್ಟೆ ಬದಲಿಸಿದರೂ ಕುತಂತ್ರಗಳು ಬದಲಾಗುತ್ತಿಲ್ಲ ಎಂದು ಜನರಿಗೆ ಅರಿವಾಗಿದೆ ಎಂದು ಅವರು ನುಡಿದರು