ಹೊಸ ಅಪರಾಧ ಕಾನೂನುಗಳು ಜಾರಿಯಾಗಲಿರುವ ಹಿನ್ನೆಲೆ ದೇಶದಲ್ಲಿರುವ ಎಲ್ಲ 17,500 ಪೊಲೀಸ್ ಠಾಣೆಗಳಲ್ಲಿ ಹೊಸ ಕಾನೂನು ಕುರಿತು ಅರಿವು ಮೂಡಿಸಲು ಮಹಿಳೆಯರು, ಯುವಕರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ಗಣ್ಯರನ್ನು ಒಳಗೊಂಡ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಹೊಸ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ- 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್-2023 ಕುರಿತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪ್ರತಿ ಪೊಲೀಸ್ ಠಾಣೆಯ ಅಧಿಕಾರಿಗಳು ವಿವರಿಸಲಿದ್ದಾರೆ. ಇದಲ್ಲದೆ, ಸ್ಥಳೀಯ ಮಟ್ಟದಲ್ಲಿ ಶಾಲೆ, ಕಾಲೇಜಿನಂತಹ ಶಿಕ್ಷಣ ಸಂಸ್ಥೆಗಳು, ಸ್ವಸಹಾಯ ಸಂಘಗಳು, ಅಂಗನವಾಡಿ ಕೇಂದ್ರಗಳಲ್ಲಿಯೂ ಈ ಕಾರ್ಯಕ್ರಮ ಆಯೋಜನೆಯಾಗಲಿದೆ.