‘ಕುಂದಾಪುರ : ‘ ಮನುಷ್ಯ ವೃದ್ಧಾಪ್ಯವನ್ನು ತಲುಪಿದಾಗ ಆತನನ್ನು , ಆಕೆಯನ್ನು ಹಿಂದಿನ ದಿನಗಳ ನೆನಪುಗಳು ಕಾಡುವುದು ಸಹಜ. ಪುಂಖಾನುಪುಂಖವಾಗಿ ಬರುವ ಅ ನೆನಪುಗಳನ್ನು ಒಂದೆಡೆ ಹಿಡಿದಿಟ್ಟು ಅಕ್ಷರಗಳಲ್ಲಿ ದಾಖಲಿಸಿದರೆ ಅನೇಕ ವಿಚಾರಗಳು ಮುಂದಿನ ತಲೆಮಾರಿನ ಮಂದಿಗೆ ಉಪಯುಕ್ತವಾಗಲೂಬಹುದು. ಆ ದೃಷ್ಟಿಯಿಂದ ಈ ಕೃತಿ ಇಂದಿನ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವಾಗಿದೆ’ ಎಂದು ವೇದಮೂರ್ತಿ ಮಡಪಾಡಿ ಕೃಷ್ಣ ಭಟ್ ಹೇಳಿದರು. ಅವರು ಇಲ್ಲಿನ ಬಸ್ರೂರು ಮೂರುಕೈ ಸಮೀಪದ ಡಾ.ಪಾರ್ವತಿ ಜಿ.ಐತಾಳ್ ಅವರ ಮನೆ ‘ಸುರಗಂಗಾ’ದಲ್ಲಿ ಲಕ್ಷ್ಮಿ ಭಟ್ ಪೂಕಳ ಬರೆದಿರುವ ‘ನೆನಪು ನೂರೆಂಟು’ ಎಂಬ ಅವರ ಆತ್ಮಕಥನವನ್ನು ಬಿಡುಗಡೆಗೊಳಿಸಿ ಮಾತನಾಡಿದರು
ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಬೆಂಗಳೂರಿನ ಟೆರ್ರಕೊಟ ಕಲಾಕೃತಿ ಉದ್ಯಮಿ ಪಿ. ಶ್ರೀಕೃಷ್ಣ ಭಟ್ , ಲಲಿತಾಲಕ್ಷ್ಮಿ ಮತ್ತು ಲೇಖಕಿ ಲಕ್ಷ್ಮಿ ಭಟ್ ಸಂದರ್ಭೋಚಿತವಾಗಿ ಮಾತನಾಡಿದರು. ಕುಮಾರಿ ಅನರ್ಘ್ಯಾ ಪ್ರಾರ್ಥನೆಯ ನಂತರ ಶ್ರೀವೆಂಕಟೇಶ್ ಪ್ರಾಸ್ತಾವಿಕ ನುಡಿಗಳನ್ನು ಆಡಿ ಸ್ವಾಗತಿಸಿದರು. ಸ್ವರ್ಣ ಗೌರಿ ಕಾರ್ಯಕ್ರಮ ನಿರೂಪಿಸಿ ಅರ್ಚನಾ ಭಟ್ ವಂದಿಸಿದರು.