ಕಾರ್ಕಳ : ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಹಾಗೂ ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ( ಪದವಿಪೂರ್ವ ಶಿಕ್ಷಣ ಇಲಾಖೆ ) ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ “ಜೀವ ವಿರೋಧಿ ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಿ : ಲಿಂಗ ಸಮಾನತೆ ಸಾಧಿಸಿ” ಎಂಬ ಶೀರ್ಷಿಕೆಯಡಿಯಲ್ಲಿ ವಾರ್ಷಿಕ ವಿಶೇಷ ಶಿಬಿರ – 2024ನ್ನು ಅಕ್ಟೋಬರ್ 2 ರಿಂದ 8 ರವರೆಗೆ ಸರಕಾರಿ ಪದವಿ ಪೂರ್ವ ಕಾಲೇಜು – ಪ್ರೌಢಶಾಲೆ ವಿಭಾಗ, ಬಜಗೋಳಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 2 ರ ಬುಧವಾರ ಅಪರಾಹ್ನ 3 ಗಂಟೆಗೆ ಶಿಬಿರದ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟಕರಾಗಿ ಡಾ. ರವೀಂದ್ರ ಶೆಟ್ಟಿ, ಉದ್ಯಮಿಗಳು, ರಾಜ್ಯ ಕ್ರಷರ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರು ಆಗಮಿಸಲಿದ್ದು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ( ಪದವಿಪೂರ್ವ ಶಿಕ್ಷಣ ಇಲಾಖೆ ) ಉಡುಪಿ ಜಿಲ್ಲೆಯ ಉಪನಿರ್ದೇಶಕರಾದ ಶ್ರೀ ಮಾರುತಿರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಹಾಗೂ ಹಲವಾರು ಗಣ್ಯ ವ್ಯಕ್ತಿಗಳು ಅತಿಥಿ ವರೇಣ್ಯರಾಗಿ ಭಾಗವಹಿಸಲಿದ್ದಾರೆ. ಪ್ರತಿದಿನವೂ ಬೆಳಗ್ಗೆ ಧ್ವಜಾರೋಹಣ ಕಾರ್ಯಕ್ರಮದಿಂದ ಮೊದಲ್ಗೊಂಡು, ಶ್ರಮದಾನ, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಶೈಕ್ಷಣಿಕ ಕಾರ್ಯಕ್ರಮಗಳು, ಸಂಜೆ ಸಮಯ 6 ಕ್ಕೆ ಸರಿಯಾಗಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಶಿಬಿರದ ಸಮಾರೋಪ ಸಮಾರಂಭವು ಅಕ್ಟೋಬರ್ 8 ರಂದು ಮಂಗಳವಾರ ಅಪರಾಹ್ನ 2.30ಕ್ಕೆ ಗಣ್ಯ ವ್ಯಕ್ತಿಗಳ ಗೌರವ ಉಪಸ್ಥಿತಿಯಲ್ಲಿ ಜರುಗಲಿದೆ. ಈ ವಾರ್ಷಿಕ ವಿಶೇಷ ಶಿಬಿರದಲ್ಲಿ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶಿಬಿರಾರ್ಥಿಗಳಾಗಿ ಭಾಗವಹಿಸಲಿದ್ದಾರೆ. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರು, ಬೋಧಕ ಬೋಧಕೇತರ ವೃಂದದವರು ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಸರಕಾರಿ ಪದವಿ ಪೂರ್ವ ಕಾಲೇಜು – ಪ್ರೌಢಶಾಲಾ ವಿಭಾಗ, ಮುಡಾರು ಬಜಗೋಳಿಯ ಸಂಚಾಲಕರು, ಮುಖ್ಯ ಶಿಕ್ಷಕರು, ಶಿಕ್ಷಕೇತರ ವೃಂದ, ಶಾಲಾ ವಿದ್ಯಾರ್ಥಿ ವೃಂದ, ಪೋಷಕ ವೃಂದ, ಆಡಳಿತ ಮಂಡಳಿ, ಶಾಲಾಭಿವೃದ್ಧಿ ಸಮಿತಿ, ಊರ ನಾಗರಿಕರು ಶಿಬಿರದ ಯಶಸ್ಸಿಗೆ ಸಹಕರಿಸಲಿದ್ದಾರೆ.