ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನ ದಂದು ರಾಜ್ಯಸಭಾ ಸದಸ್ಯೆಯಾಗಿ ನಾಮಾಂಕಿತವಾಗಿದ್ದ ಕನ್ನಡತಿ, ಇನ್ಫೋಸಿಸ್ ಪ್ರತಿಷ್ಠಾನದ ಮಾಜಿ ಅಧ್ಯಕ್ಷೆ ಹಾಗೂ ಸಮಾಜಸೇವಕಿ ಸುಧಾ ಮೂರ್ತಿ ರಾಜ್ಯ ಸಭಾ ಸದಸ್ಯೆಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದರು.
ರಾಜ್ಯಸಭಾ ಸ್ಪೀಕರ್ ಅವರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ತಮ್ಮ ಪತಿ ನಾರಾಯಣ ಮೂರ್ತಿ ಸಮ್ಮುಖದಲ್ಲಿ ಅವರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು. ಉಪರಾಷ್ಟ್ರಪತಿ ಜಗದೀಪ್ ಧನ್ಗರ್ ಸುಧಾ ಮೂರ್ತಿಗೆ ಪ್ರಮಾಣವಚನ ಬೋಧಿಸಿದರು. ಈ ವೇಳೆ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಕೂಡ ಹಾಜರಿದ್ದರು.ಸುಧಾಮೂರ್ತಿಯವರು ಟೆಲ್ಲೊ ಕಂಪನಿಯಲ್ಲಿ ಮೊದಲ ಮಹಿಳಾ ಎಂಜಿನಿಯರ್ ಆಗಿ ದುಡಿದ ಹಣವನ್ನು ಉಳಿಸಿ ಇನ್ಫೋಸಿಸ್ ಸಂಸ್ಥೆ ಹುಟ್ಟು ಹಾಕಲು ತಮ್ಮ ಪತಿಗೆ ನೆರವಾಗಿದ್ದರು.