ಪಡುಬಿದ್ರಿ : ಕಾಪು ವಿಧಾನಸಭಾ ಕ್ಷೇತ್ರದ ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಡಿಪಟ್ನ ಭಾಗದಲ್ಲಿ ವಿಪರೀತ ಕಡಲ್ಕೊರೆತ ಉಂಟಾಗಿ ಕಡಲ ತೀರದಲ್ಲಿರುವ ಮನೆಗಳು ಅಪಾಯದಲ್ಲಿದ್ದು ಈ ಸಂಬಂಧ ಮೀನುಗಾರಿಕೆ ಮತ್ತು ಬಂದರು ಸಚಿವರಾದ ಮಂಕಾಳ ವೈದ್ಯ ಅವರೊಂದಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಕಡಲ್ಕೊರೆತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈಗಾಗಲೇ ಕಡಲ್ಕೊರೆತದಿಂದ ಅನೇಕ ತೆಂಗಿನ ಮರಗಳು ಸಮುದ್ರದ ಪಾಲಾಗಿದ್ದು ಜೊತೆಗೆ ನಡಿಪಟ್ನ ಬ್ಲೂ ಫ್ಲಾಗ್ ಬೀಚ್ ಸಂಪರ್ಕ ರಸ್ತೆಗೂ ಹಾನಿ ಉಂಟಾಗಿದೆ ಕಡಲ್ಕೊರೆತ ತಡೆಗೆ ತಕ್ಷಣದಲ್ಲಿ ಅನುದಾನ ಮಂಜೂರು ಮಾಡುವಂತೆ ಶಾಸಕರು ಸಚಿವರು ಬಳಿ ಮನವಿ ಮಾಡಿದರು
ಶಾಸಕರ ಮನವಿಗೆ ಸ್ಪಂದಿಸಿದ ಮೀನುಗಾರಿಕೆ ಬಂದರು ಸಚಿವರು ಒಂದು ಕೋಟಿ ಅನುದಾನ ನೀಡುವುದಾಗಿ ತಿಳಿಸಿ ತಕ್ಷಣವೇ ಕಾಮಗಾರಿ ಆರಂಭಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ, ಸದಸ್ಯರಾದ ವಿದ್ಯಾ ಶ್ರೀ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ ಹಾಗೂ ಹಾಗೂ ಮೀನುಗಾರ ಮುಖಂಡರು, ಸ್ಥಳೀಯರು ಉಪಸ್ಥಿತರಿದ್ದರು.