ಬೈಂದೂರು :ಬೈಂದೂರಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕ ಗಂಟಿಹೊಳೆ ಅವರು ಇದೀಗ ಬೈಂದೂರು-ಬೆಂಗಳೂರಿನ ನಡುವೆ ದಿನನಿತ್ಯ ಓಡಾಡುವ ಜನರ ಬಗ್ಗೆ ಕಾಳಜಿ ವಹಿಸಿ ಕ್ಷೇತ್ರದ ಸಂಸದರಾದ ಬಿ.ವೈ. ರಾಘವೇಂದ್ರ ಅವರಿಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ.
ಸಂಸದರಿಗೆ ನೀಡಲಾದ ಪತ್ರದ ಒಕ್ಕಣೆಯಲ್ಲಿ “ಪಂಚಗಂಗಾ ರೈಲಿಗೆ ಹೆಚ್ಚುವರಿ ಬೋಗಿ ಅಳವಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಮುತುವರ್ಜಿಯಿಂದ ಬೈಂದೂರು ರೈಲು ನಿಲ್ದಾಣದಲ್ಲಿ ಸಾಕಷ್ಟು ರೈಲುಗಳು ನಿಲುಗಡೆಯಾಗುತ್ತಿದೆ. ಬೈಂದೂರು ಭಾಗದ ಸಾವಿರಾರು ಜನರು ವ್ಯಾಪಾರ, ವಿದ್ಯಾಭ್ಯಾಸ ಹಾಗೂ ಉದ್ಯೋಗ ನಿಮಿತ್ತ ರಾಜಧಾನಿ ಬೆಂಗಳೂರನ್ನು ಅವಲಂಬಿಸಿದ್ದಾರೆ. ಅವರುಗಳೆಲ್ಲಾ ತುರ್ತು ಪರಿಸ್ಥಿತಿ, ಶುಭ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ಹಾಗೂ ಸ್ವಕ್ಷೇತ್ರ ಭೇಟಿಗೆ ಪ್ರತಿನಿತ್ಯ ಬೆಂಗಳೂರಿನಿಂದ ಬೈಂದೂರಿಗೆ ಹಾಗೂ ಬೈಂದೂರಿನಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿರುತ್ತಾರೆ.
ಪ್ರಸ್ತುತ ಬೆಂಗಳೂರು-ಕಾರವಾರ ರೈಲು ನಂ. 16595/16596 ರೈಲು 14 ಬೋಗಿಗಳೊಂದಿಗೆ ಪ್ರತಿನಿತ್ಯ ಸಂಚರಿಸುತ್ತಿದ್ದು ಎಲ್ಲಾ ಬೋಗಿಗಳು ತುಂಬಿರುತ್ತವೆ. ಅಸಂಘಟಿತ ಕಾರ್ಮಿಕರು, ಆರೋಗ್ಯ ಸಮಸ್ಯೆಯಿರುವವರು ಹಾಗೂ ಹಿರಿಯ ನಾಗರೀಕರು ಅಗ್ಗದ ದರದಲ್ಲಿ ದೊರೆಯುವ ರೈಲು ಸೇವೆಯನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಆದ್ದರಿಂದ ಪ್ರಸ್ತುತ 14 ಬೋಗಿಗಳೊಂದಿಗೆ ಸಂಚರಿಸುವ ಪಂಚಗಂಗಾ ಎಕ್ಸ್‌ಪ್ರೆಸ್ ರೈಲು ಕರಾವಳಿಯ ರೈಲ್ವೆ ನಿಲ್ದಾಣಗಳನ್ನು ತಲುಪುವ ಸಮಯವನ್ನು ಬದಲಾಯಿಸದೆ ಹೆಚ್ಚುವರಿ 8 ಬೋಗಿಗಳನ್ನು ಸೇರ್ಪಡೆಗೊಳಿಸಿ 22 ಬೋಗಿಗಳನ್ನಾಗಿಸಿದರೆ ಕರಾವಳಿಯ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ.
ಆದ್ದರಿಂದ ಪಂಚಗಂಗಾ ಎಕ್ಸ್‌ಪ್ರೆಸ್ ರೈಲು ನಂ. 16595/16596 ರೈಲನ್ನು 22 ಬೋಗಿಗಳಿಗೆ ಮೇಲ್ದರ್ಜೆಗೇರಿಸಲು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಿ ಮಂಜೂರು ಮಾಡಿಸಬೇಕಾಗಿ ತಮ್ಮಲ್ಲಿ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.” ಎಂದು ಬರೆದು ಸಂಸದರಲ್ಲಿ ಗಂಟಿಹೊಳೆ ಮನವಿ ಮಾಡಿಕೊಂಡಿದ್ದಾರೆ