ಉಡುಪಿ: ಭಿನ್ನ ಕೋಮಿಗೆ ಸೇರಿದ ಯುವಕ ಮತ್ತು ಯುವತಿ ಬೈಕಿನಲ್ಲಿ ತೆರಳುತ್ತಿದ್ದಾಗ ಕೆಲವು ಯುವಕರು ತಡೆದು ನಿಲ್ಲಿಸಿ ಬೆದರಿಸಿದ ಘಟನೆಯ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಳೆದ ತಿಂಗಳ 22 ರಂದು ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿರಿಮನೆ ಫಾಲ್ಸ್ ಗೆ ತೆರಳಿದ್ದ ಕಾಪು ಮೂಲದ ಯುವಕ ಮತ್ತು ಯುವತಿ ಹಿಂದಕ್ಕೆ ಬರುವಾಗ ಹಿಂದೂ ಸಂಘಟನೆಯ ಕಾರ್ಯಕರ್ತರು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಯುವತಿ ತಮ್ಮನ್ನು ಬಿಟ್ಟುಬಿಡುವಂತೆ ತಮ್ಮ ವಿಡಿಯೋ ಮಾಡದಂತೆ ಯುವಕರಲ್ಲಿ ವಿನಂತಿ ಮಾಡಿದ್ದರೂ ಬಿಡದೆ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು ಬಳಿಕ ಯುವಕ ಮತ್ತು ಯವತಿಯ ಕುಟುಂಬದ ಸದಸ್ಯರ ಸಮ್ಮುಖ ಮಾತುಕತೆ ನಡೆದು ಎರಡು ಕುಟುಂಬದವರು ಪರಿಚಯಸ್ಥರಾಗಿರುವ ಕಾರಣ ನಮಗೆ ಯಾವುದೇ ರೀತಿಯ ಅನುಮಾನ ಯುವಕನ ಮೇಲೆ ಇಲ್ಲ ಎಂದು ಪ್ರಕರಣ ದಾಖಲಿಸಿದೆ ವಾಪಾಸಾಗಿದ್ದರು.
ಘಟನೆಯ ವೇಳೆ ಸಂಘಟನೆಯ ಯುವಕರು ವೀಡಿಯೋ ಮಾಡಿಕೊಂಡಿದ್ದು ಅದನ್ನು ಪೊಲೀಸರು ಆ ವೇಳೆ ಡಿಲಿಟ್ ಮಾಡಿರಲಿಲ್ಲ ಎನ್ನಲಾಗಿದೆ.ಬಳಿಕ ಆ ವೀಡಿಯೋಗಳು ಯಶೋಧರ ಯಾನೆ ಯಶು ಮತ್ತು ಹಿಂದೂ ಧರ್ಮ 006 ಎಂಬ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಇನ್ ಸ್ಟಾ ಗ್ರಾಂ ಖಾತೆಯಲ್ಲಿ ವೈರಲ್ ಮಾಡಲಾಗಿದ್ದು ಈ ಘಟನೆಗೆ ಸಂಬಂಧಿಸಿದಂತೆ ಯುವತಿಯ ಸಹೋದರ ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ 8-10 ಮಂದಿ ಸಂಘಟನೆಯ ಯುವಕರ ಮೇಲೆ ಪ್ರಕರಣ ದಾಖಲಾಗಿದೆ.