ಬೆಂಗಳೂರು : ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ಬೆನ್ನಲ್ಲೇ ವಿದೇಶಕ್ಕೆ ಹಾರಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಿಂದ ಮರಳಲು ಮುಂಚಿತವಾಗಿಯೇ ಮೇ 15ಕ್ಕೆ ಟಿಕೆಟ್ ಮಾಡಿಸಿದ್ದಾರೆ ಎನ್ನಲಾಗಿದೆ. ಆದರೆ ಅದಕ್ಕೂ ಮೊದಲೇ ವಾಪಸಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎಂದು ಮೂಲಗಳು ತಿಳಿಸಿವೆ. ವಾಪಸ್ ಬರುವುದಕ್ಕೆ ಮೊದಲೇ ಟಿಕೆಟ್ ಮಾಡಿಸಲಾಗಿದೆಯಾದರೂ ಈಗ ಎಸ್‌ಐಟಿ ನೋಟಿಸ್ ನೀಡಿ ರುವ ಹಿನ್ನೆಲೆಯಲ್ಲಿ ಅದನ್ನು ರದ್ದುಪಡಿಸಿ ಶೀಘ್ರವೇ ವಾಪಸ್ ಬರಬಹುದು. ಪ್ರಕರಣದ ತನಿಖೆ ಸ್ವರೂಪ ಹಾಗೂ ರಾಜಕೀಯ ಬೆಳವಣಿಗಗಳ ಗಮನಿಸಿ ಈ ಬಗ್ಗೆ ನಿರ್ಧರಿಸುತ್ತಾರೆ ಎನ್ನಲಾಗುತ್ತಿದೆ. ವಿಚಾರಣೆಗೆ ಹಾಜರಾಗಲು ತಮ್ಮ ವಕೀಲರ ಮೂಲಕ ಎಸ್‌ಐಟಿ ತಂಡಕ್ಕೆ 1 ವಾರ ಕಾಲಾವಕಾಶ ಕೋರಿದ್ದರಿಂದ ಮೂರ್ನಾಲ್ಕು ದಿನಗಳಲ್ಲಿ ವಾಪಸಾಗುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.
ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ಮತದಾನಕ್ಕೆ ಎರಡು ದಿನಗಳ ಮುನ್ನ ಪ್ರಜ್ವಲ್ ನಡೆಸಿದ್ದಾರೆ ಎನ್ನಲಾದ ರಾಸಲೀಲೆಗಳ ವಿಡಿಯೋಗಳು ತುಂಬಿದ್ದ ‘ಪೆನ್ * ಡ್ರೈವ್’ ಸ್ಫೋಟಗೊಂಡು ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ಭಾರಿ ಸದ್ದು ಮಾಡಿತ್ತು. ಈ ಲೈಂಗಿಕ ಹಗರ ಣದ ಆರೋಪ ಜೋರಾದ ಕೂಡಲೇ ಜರ್ಮನಿಗೆ ರಾತ್ರೋರಾತ್ರಿ ಪ್ರಜ್ವಲ್ ತೆರಳಿದ್ದರು. ವಿಚಾರಣೆಗೆ ಹಾಜರಾಗುವಂತೆ ಅವರನ್ನು ಎಸ್‌ಐಟಿ ಕರೆದಿದೆ.