ಮಂಗಳೂರು: ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಚುನಾವಣಾ ಪ್ರಣಾಳಿಕೆ ರೂಪಿಸಲು ಸಂಕಲ್ಪ ಪತ್ರ ಅಭಿಪ್ರಾಯ ಸಂಗ್ರಹ ಅಭಿಯಾನ ಆರಂಭವಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ. ವತಿಯಿಂದ ಶುಕ್ರವಾರ ನಗರದಲ್ಲಿ ಸಂಕಲ್ಪ ಪತ್ರ ಬಿಡುಗಡೆ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಸಮಾರಂಭದಲ್ಲಿ ದ.ಕ. ಬಿಜೆಪಿ ಪ್ರಣಾಳಿಕೆ ಸಮಿತಿ ಸಂಚಾಲಕ ಸಿಎ ಶಾಂತಾರಾಮ ಶೆಟ್ಟಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಬಿಜೆಪಿ ದ.ಕ. ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾ.ಬೃಜೇಶ್ ಚೌಟ ಅವರು ಸಂಕಲ್ಪ ಪತ್ರ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಸಿಎ ಶಾಂತಾರಾಮ ಶೆಟ್ಟಿ ದ.ಕ. ಲೋಕಸಭಾ ಕ್ಷೇತ್ರದಿಂದ 50,000 ಸಲಹೆಗಳನ್ನು ನಿರೀಕ್ಷೆ ಮಾಡಿದ್ದು ‘ನಿಮ್ಮ ಸಲಹೆ ನಮ್ಮ ಸಂಕಲ್ಪ’ ಎನ್ನುವ ನಿಟ್ಟಿನಲ್ಲಿ ಇವತ್ತು ತಮ್ಮ ಸಲಹೆಗಳನ್ನು ಪೆಟ್ಟಿ ಗೆಗೆ ಹಾಕುವುದರೊಂದಿಗೆ ಸಂಕಲ್ಪ ಪತ್ರಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು. ದೇಶದ 145 ಕೋಟಿ ಜನರ ಆಶೋತ್ತರಗಳನ್ನು ಗಮನದಲ್ಲಿರಿಸಿಕೊಂಡು ಕನಿಷ್ಟ ಒಂದು ಕೋಟಿಗೂ ಹೆಚ್ಚು ಸಲಹೆಗಳನ್ನು ಪಡೆಯುವ ಗುರಿಯನ್ನು ರಾಜ್ಯ ಬಿಜೆಪಿ ಹೊಂದಿದೆ. ಈ ನಿಟ್ಟಿನಲ್ಲಿ ದ.ಕ. ಜಿಲ್ಲೆಯ ಲೋಕಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಒಂದು ತಿಂಗಳ ಕಾಲ ಸಲಹೆಗಳನ್ನು ಸ್ವೀಕರಿಸಲಾಗುವುದು. ಇಲ್ಲಿ ಬಂದ ಎಲ್ಲ ಸಲಹೆಗಳನ್ನು ಸಂಕಲ್ಪ ಪತ್ರದಲ್ಲಿ ಜೋಡಿಸಿ ಅದನ್ನು ಕೇಂದ್ರ ಕಚೇರಿಗೆ ಕಳುಹಿಸಲಾಗುವುದು ಎಂದರು