ಉಡುಪಿ ; ಉಡುಪಿಯ ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಶ್ರೀಕೃಷ್ಣ ಪೂಜೆಯ ದ್ವೈವಾರ್ಷಿಕ ಪರ್ಯಾಯ ನಿಟ್ಟಿಲ್ಲಿ ನಾಲ್ಕನೇ ಬಾರಿ 2024 ಜ.18 ರಂದು ಸರ್ವಜ್ಞ ಪೀಠವನ್ನೇರಲಿದ್ದು ಪರ್ಯಾಯ ಪೂರ್ವಭಾವಿ ನಾಲ್ಕನೇ ಹಾಗೂ ಕೊನೆಯದಾದ ಧಾನ್ಯ ಮುಹೂರ್ತವು ಬುಧವಾರ ನೆರವೇರಿತು
ಈಗಾಗಲೇ ಬಾಳೆ, ಅಕ್ಕಿ, ಕಟ್ಟಿಗೆ ಮುಹೂರ್ತ ಪೂರೈಸಿದ್ದು ತೀರ್ಥ ಕ್ಷೇತ್ರ ಸಂಚಾರ ಬಳಿಕ ಜ.೮ ರಂದು ತಮ್ಮ ಶಿಷ್ಯ ಶ್ರೀಸುಶ್ರೀಂದ್ರತೀರ್ಥರ ಒಡಗೂಡಿ ಶ್ರೀಸುಗುಣೇಂದ್ರತೀರ್ಥರು ಉಡುಪಿ ಪುರಪ್ರವೇಶ ಮಾಡಲಿದ್ದಾರೆ.
ಧಾನ್ಯ ಮುಹೂರ್ತ ಅಂಗವಾಗಿ ಪುತ್ತಿಗೆ ಮಠದ ವಿಠಲ ದೇವರಿಗೆ ಬೆಳಗ್ಗಿನ ಮಹಾಪೂಜೆ ಸಲ್ಲಿಸಿ, ದೇವತಾ ಪ್ರಾರ್ಥನೆ ನೆರವೇರಿತು. ಬಳಿಕ ಮೆರವಣಿಗೆಯಲ್ಲಿ ತೆರಳಿ ಚಂದ್ರೇಶ್ವರ, ಅನಂತೇಶ್ವರ, ಶ್ರೀಕೃಷ್ಣ ಮುಖ್ಯಪ್ರಾಣ, ಗರುಢ, ಮಧ್ವ, ಸರ್ವಜ್ಞ ಸಿಂಹಾಸನ, ಭೋಜನ ಶಾಲೆ ಪ್ರಾಣ ದೇವರು, ಸುಬ್ರಹ್ಮಣ್ಯ ಗುಡಿ, ನವಗ್ರಹ ಗುಡಿ, ವೃಂದಾವನ, ಗೋ ಶಾಲೆಗೆ ತೆರಳಿ ಪ್ರಾರ್ಥನೆ ಸಲ್ಲಿಸಲಾಯಿತು. ಪುತ್ತಿಗೆ ಮಠಕ್ಕೆ ಮರಳಿ ಬಂದು ತಲೆ ಹೊರೆಯಲ್ಲಿ ಧಾನ್ಯ ಮುಡಿ, ಸ್ವರ್ಣ ಪಲ್ಲಕ್ಕಿಯಲ್ಲಿ ಕಿರು ಮುಡಿಯಿಟ್ಟು ರಥಬೀದಿಯಲ್ಲಿ ಮೆರವಣಿಗೆ ಬಳಿಕ ಶ್ರೀಕೃಷ್ಣಮಠದ ಬಡಗುಮಾಳಿಗೆಯ ಗದ್ದುಗೆಯಲ್ಲಿ ನಾಲ್ಕು ಮುಡಿಗಳ ಮೇಲೆ ಕಿರು ಮುಡಿಯಿಟ್ಟು ಪೂಜೆ ಸಲ್ಲಿಸಲಾಯಿತು