ಬೆಂಗಳೂರು : ದೇಶದಾದ್ಯಂತ ವ್ಯಾಪಕವಾಗಿ ಅಪಾರ ಸಂಖ್ಯೆಯಲ್ಲಿ ಇರುವ ವೈಷ್ಣವ ಸಮಾಜ ಅನಿವಾರ್ಯ ಕಾರಣಗಳಿಂದ ಚದುರಿಹೋಗಿದೆ. ಈ ಕಾಲಘಟ್ಟದಲ್ಲಿ ನಾವೆಲ್ಲರೂ ಒಂದಾಗಬೇಕು. ನಮ್ಮಲ್ಲಿರುವ ಸಂಕುಚಿತ ಮನೋಭಾವವನ್ನು ದೂರ ಮಾಡಿಕೊಂಡು ಸಮಾಜದ ಏಳಿಗೆಯನ್ನು ಗಮನಿಸಬೇಕು. ಈ ನಿಟ್ಟಿನಲ್ಲಿ ನಾವು ವೈಷ್ಣವ ಸಮಾಜದ ಏಕತೆಗಾಗಿ ವಿಶಿಷ್ಟ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಜಗದ್ಗುರು ಶ್ರೀಮಧ್ವಾಚಾರ್ಯರ ತತ್ವದ ಆಧಾರದಲ್ಲಿಯೇ ಬೆಳೆದು ಬಂದಿರುವ ಗೌಡೀಯ ವೈಷ್ಣವ ಪಂಥದವರು ದೇಶದಾದ್ಯಂತ ಅತ್ಯಂತ ಶ್ರೇಷ್ಠವಾದ ಕಾರ್ಯವನ್ನು ನಡೆಸುತ್ತಿದ್ದಾರೆ. ಜನರಲ್ಲಿ ಶ್ರೀಕೃಷ್ಣ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಿದ್ದಾರೆ. ನಮ್ಮ ಕಾರ್ಯಕ್ರಗಳಲ್ಲಿಯೂ ಅತ್ಯಂತ ಶ್ರದ್ಧೆಯಿಂದ ಭಾಗವಹಿಸುತ್ತಿದ್ದಾರೆ. ಹೀಗೆ ಧರ್ಮ ಸಂರಕ್ಷಣೆಗಾಗಿ ಎಲ್ಲರೂ ಒಟ್ಟಾಗಿ ಕಾರ್ಯಕ್ರಮಗಳನ್ನು ಆಯೋಜಿಸೋಣ. ಇದಕ್ಕೆ ಎಲ್ಲರ ಸಹಕಾರ ಮತ್ತು ಸಹಭಾಗಿತ್ವ ಅತ್ಯಗತ್ಯ ಎಂದು ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ನುಡಿದರು
ಅವರು ಬೆಂಗಳೂರಿನ ಬಸವನಗುಡಿಯಲ್ಲಿರುವ ಗೋವರ್ಧನ ಕ್ಷೇತ್ರದಲ್ಲಿ ಗೌಡೀಯ ವೈಷ್ಣವ ಸಮಾಜದ ಸಹಭಾಗಿತ್ವದಲ್ಲಿ ನಡೆದ ವೈಷ್ಣವ ಸಂಗಮ್ ಕಾರ್ಯಕ್ರಮವನ್ನು ಉದ್ಘಾಟಿಸಿ ಪರಮಪೂಜ್ಯ ಶ್ರೀಪಾದರು ಅನುಗ್ರಹ ಸಂದೇಶವನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉತ್ತರ ಪ್ರದೇಶದ ವೃಂದಾವನ ಕ್ಷೇತ್ರದ ಗೋಪೀನಾಥ ಗೌಡೀಯ ಮಠದ ಕಾರ್ಯದರ್ಶಿಗಳಾದ ಹಾಗೂ ಅಂತಾರಾಷ್ಟ್ರೀಯ ಧರ್ಮ ಪ್ರಚಾರಕರಾದ ಶ್ರೀಯಜ್ನೇಶ್ವರ ಪ್ರಭುಗಳು ಶ್ರೀಮಧ್ವಾಚಾರ್ಯರ ಪರಂಪರೆಯಲ್ಲಿ ಗೌಡೀಯ ಮಠ ಬೆಳೆದು ಬಂದ ಹಿನ್ನಲೆಯನ್ನು ವಿವರಿಸಿದರು.
ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀಪಾದರು ಸಂಕಲ್ಪಿಸಿರುವ ಕೋಟಿಗೀತಾ ಲೇಖನ ಯಜ್ಞದ ಯಶಸ್ಸಿಗೆ ಸಂಪೂರ್ಣ ಬೆಂಬಲವನ್ನು ತಿಳಿಸಿದರು. ಗೌಡೀಯ ಪಂಥದ ಪ್ರಚಾರಕರಾದ ಶ್ರೀಉಮಾಶಂಕರ್ ಪ್ರಭು ಹಾಗೂ ಶ್ರೀವಿಜಯಕೃಷ್ಣ ಉಪಸ್ಥಿತರಿದ್ದರು. ಡಾ.ಬಿ.ಗೋಪಾಲಾಚಾರ್ಯರು ಕಾರ್ಯಕ್ರಮವನ್ನು ನಿರೂಪಿಸಿದರು ನೂರು ಭಕ್ತರು ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆಯನ್ನು ಸ್ವೀಕರಿಸಿದರು