ಆಸ್ಟ್ರೇಲಿಯಾ : ವಿಶ್ವಾದ್ಯಂತ ಶ್ರೀಕೃಷ್ಣ ಭಕ್ತಿ ಪ್ರಚಾರ ಮಾಡುತ್ತಿರುವ ,ಮತ್ತು ಅಲ್ಲಲ್ಲಿ ಶ್ರೀಕೃಷ್ಣ ಮಂದಿರವನ್ನು ಸ್ಥಾಪಿಸಿರುವ ಪೂಜ್ಯ ಪುತ್ತಿಗೆ ಶ್ರೀಪಾದರ ಅಪೇಕ್ಷೆಯಂತೆ ಆಸ್ಟ್ರೇಲಿಯಾದ ಸಿಡ್ನಿ ಮಹಾನಗರದಲ್ಲಿ , ಬೃಹತ್ ಶ್ರೀಕೃಷ್ಣಮುಖ್ಯಪ್ರಾಣ ಮತ್ತು ಗುರುರಾಯಯರ ಮಂದಿರವನ್ನು ನಿರ್ಮಿಸಲು ಸಂಕಲ್ಪಿಸಿದ್ದು ಅದರ ಭೂಮಿಪೂಜೆಯನ್ನು ಹಯಗ್ರೀವ ಜಯಂತಿಯ ಪುಣ್ಯದಿನದಂದು ನಡೆಸಲಾಯಿತು .
ಸಿಡ್ನಿ ಮಹಾನಗರದ ಭಕ್ತರ ಮತ್ತು ಸರಕಾರಿ ಅಧಿಕಾರಿಗಳ ಸಮಕ್ಷಮದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಜ್ಯದ ಎಂಪಿ ಶ್ರೀಮತಿ ಚರಿಷ್ಮಾ ಕಲಿಯಂಡ ,ಬ್ಲಾಕ್ಟೌನ್ ಸಿಟಿ ಕೋನ್ಸಿಲರ್ಸ್ ಲಿವಿಂಗ್ಸ್ಟನ್ ಹಾಗೂ ಪೀಟರ್ ಕಮಿಲೇರಿ, ಸ್ವಾಮಿ ನಾರಾಯಣ ಟೆಂಪಲ್ ನ ದಿನೇಶಜಿ , ಭಾರತೀಯ ರಾಷ್ಟ್ರ ಸಮಿತಿಯ ರಾಜೇಶ್ ರೇಪೋಲ್ , ಕೌನ್ಸಿಲರ್ ಶ್ರೀನಿ ಪಿಳ್ಳಮಾರಿ ಯವರು ವಿಶೇಷವಾಗಿ ಆಹ್ವಾನಿತರಾಗಿ ಉಪಸ್ಥಿತರಿದ್ದು ಶುಭಾಶಯ ಸಲ್ಲಿಸಿದರು . ಶ್ರೀಮಠದಿಂದ ಮುಖ್ಯಕಾರ್ಯದರ್ಶಿ ಶ್ರೀಪ್ರಸನ್ನಾಚಾರ್ಯ ಸ್ವಾಗತಿಸಿದರು . ಶ್ರೀ ಜಗನಮೋಹನ್ ಕೆ ರವರು ವಂದಿಸಿದರು .ಶ್ರೀನಿವಾಸ ರವರು ಜಾರ್ಯಕ್ರಮ ನಿರೂಪಿಸಿದರು . ಶ್ರೀರಾಮಕೃಷ್ಣ ಅಂಕಿತವಾದ ಇಟ್ಟಿಗೆಗಳಿಗೆ ಭಕ್ತರು ಶ್ರೀರಾಘವೇಂದ್ರ ನಾಮ ಜಪ ಮಾಡುತ್ತ ಪೂಜೆ ಸಲ್ಲಿಸಿದರು . ಇದಕ್ಕೆ ಮುನ್ನ ಸ್ಥಳದಲ್ಲಿ ಭೂವರಾಹ ಹೋಮವನ್ನು ಶ್ರೀಮಠದ ನಿತೀಶಾಚಾರ್ಯ ,ಶ್ರೀನಿವಾಸಾಚಾರ್ಯ ನೆರವೇರಿಸಿದರು .ಬೆಂಗಳೂರು ಮಹಾನಗರದಲ್ಲಿ ತಮ್ಮ ಸುವರ್ಣ ಚಾತುರ್ಮಾಸ್ಯ ದೀಕ್ಷೆಯಲ್ಲಿರುವ ಪೂಜ್ಯ ಶ್ರೀಪಾದರು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಕಳುಹಿಸಿದ ಪವಿತ್ರ ಪ್ರಸಾದವನ್ನು ಭೂಮಿಪೂಜೆಯಲ್ಲಿ ಇರಿಸಲಾಯಿತು . ಪೂಜ್ಯ ಶ್ರೀಪಾದರು ಈ ಐತಿಹಾಸ ಕಾರ್ಯಕ್ರಮಕ್ಕೆ ತಮ್ಮ ಸಂದೇಶದ ಮೂಲಕ ಭಕ್ತರನ್ನು ಅನುಗ್ರಹಿಸಿದರು .