ಕುಂದಾಪುರ : ಹುಟ್ಟಿನ ಕೊಂಬೆಯಿಂದ ಸಾವಿನ ಕೊಂಬೆಗೆ ಒಂದೇ ನೆಗೆತಕ್ಕೆ ಜಿಗಿಯುವ ಅನಿವಾರ್ಯತೆ ಏನಿತ್ತು ರಾಹುಲ್…?
ಉತ್ತರ ಕೊಡಬೇಕಾದ ಆತ್ಮೀಯ ಸ್ವಯಂಸೇವಕ ಸಹೋದರ ಇಂದು ನಮ್ಮೊಂದಿಗಿಲ್ಲವೆನ್ನುವುದೇ ಮನಸ್ಸು ಒಪ್ಪುವುದಿಲ್ಲ 2 ವರ್ಷದ ಹಿಂದೆ ತಂದೆಯನ್ನು ಕಳೆದುಕೊಂಡ ಮನೆಗೆ ಆಧಾರ ಸ್ತಂಭವಾಗಿ, ಹೆಬ್ರಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕಿನ ಕಾರ್ಯವಾಹರಾಗಿ ದೊಡ್ಡ ಜವಬ್ದಾರಿ ಹೊತ್ತುಕೊಂಡು ಸಂಘ ರಥದ ಸಾರಥ್ಯ ಮಾಡುತ್ತಿದ್ದ ರಾಹುಲ್ ರಿಗೆ ಕೇವಲ 26 ವರ್ಷವಷ್ಟೇ…
ಇಂತಹ ಎಳೆ ವಯಸ್ಸಿನ ದೇವದುರ್ಲಭ ಕಾರ್ಯಕರ್ತನನ್ನು ನೋಡಿ ಭಗವಂತನೇ ತನಗಿರಲಿ ಎಂದು ಬಳಿ ಕರೆಸಿಕೊಂಡನೋ ಏನೋ?
ಧ್ವನಿ ಎತ್ತರಿಸಿ ಮಾತೇ ಆಡದ, ಹಿತ ಮಿತ ಮಾತಿನ, ಸೌಮ್ಯ ಸ್ವಭಾವ, ಎಲ್ಲರ ಜೊತೆಗಿನ ಆತ್ಮೀಯ ಸಂಬಂಧದಿಂದ ಎಲ್ಲರಿಗೂ ಬೇಕಾದವರಾಗಿ ಬದುಕಿದ್ದ ರಾಹುಲ್ ಸಂಘಕಾರ್ಯದ ಜೊತೆಗೆ ಸ್ಥಳೀಯ ಸಂಘ- ಸಂಸ್ಥೆಗಳು ಮತ್ತು ಭಜನಾ ತಂಡಗಳಲ್ಲಿ ಸಕ್ರೀಯರು. ಸಮಯದ ಹೊಂದಾಣಿಕೆ ಕಷ್ಟವಲ್ಲವೇ ಎಂದು ಒಮ್ಮೆ ಕೇಳಿದಾಗ ಕಷ್ಟವಾದರೂ ನಾವು ಅವರ ಜೊತೆ ಇದ್ದಾಗ ಅವರಿಗೂ ಸಂಘದ ವಿಚಾರಗಳ ಪರಿಚಯವಾಗುತ್ತದೆ ಅಂದಿದ್ದರು.
ಪ್ರತೀವರ್ಷ ರಕ್ಷಾಬಂಧನಕ್ಕೆ ರಾಹುಲರ ಪತ್ರ ತಪ್ಪದೇ ಬರುತ್ತಿತ್ತು. ರಕ್ಷಾಬಂಧನ ಶುಭಾಶಯದ ಜೊತೆಗೆ ರಾಷ್ಟ ಕಾರ್ಯಕ್ಕೆ ಜೊತೆಯಾಗುವ ಸಂದೇಶವನ್ನು ಹೊತ್ತು ತರುತ್ತಿದ್ದ ಪತ್ರಕ್ಕೆ ಇಷ್ಟು ಬೇಗ ಪೂರ್ಣವಿರಾಮ ಹಾಕಬಾರದಿತ್ತು.
ಅವರು ಆವಾಗಾವಾಗ ಫೇಸ್ಬುಕ್ ನಲ್ಲಿ ಹಾಕುತ್ತಿದ್ದ ಪೋಟೋಗಿಂತ ಹೆಚ್ಚು ಅದರ ಜೊತೆಗೆ ಬರೆಯುವ ಸಾಲುಗಳು ನನ್ನನ್ನು ಸೇರಿಸಿ ಅನೇಕರ ಪ್ರೀತಿಯ ತಮಾಷೆಗೆ ಗುರಿಯಾಗುತ್ತಿತ್ತು. ಪ್ರತೀ ವಾಟ್ಸಪ್ ಸಂದೇಶಕ್ಕೂ ಅವರಿಂದ ಬರುತ್ತಿದ್ದ ತಮಾಷೆಯ ಉತ್ತರಗಳು, ಪೋನ್ ಮಾಡಿದಾಗ ಮಾಡುತ್ತಿದ್ದ ಪ್ರೀತಿಯ ಜಗಳ, ಮೊನ್ನೆ ಮೊನ್ನೆಯಷ್ಟೆ ಜಿಲ್ಲೆಯ ವರ್ಗದಲ್ಲಿ ಬೆಳಗಿನ ಜಾವದವರೆಗೆ ಹರಟೆ ತಮಾಷೆಯಲ್ಲಿ ಜೊತೆಗಿದ್ದ ನಗುಮುಖದ ರಾಹುಲ್ ಇಂದು ನಮ್ಮೊಂದಿಗಿಲ್ಲವೆನ್ನುವುದೇ ಮನಸ್ಸು ಒಪ್ಪದ ವಿಷಯ.
ಮನೆಯ ಕಷ್ಟ, ಕೆಲಸದ ಒತ್ತಡ ಇದೆಲ್ಲದರ ನಡುವೆ ಸಂಘಕಾರ್ಯವನ್ನು ಜೀವನ ವೃತವಾಗಿ ಸ್ವೀಕರಿಸಿ ದೇಶಮೊದಲು ಎನ್ನುವ ಚಿಂತನೆಯಲ್ಲಿ ಕೆಲಸ ಮಾಡುತ್ತಿದ್ದ ರಾಹುಲರದು ಭಾನುವಾರ ಇಡೀ ದಿನ ಸಂಘ ಕಾರ್ಯಕ್ಕಾಗಿ ಓಡಾಟ. ಇದೆಕ್ಕೆಲ್ಲಾ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸುವುದು ರಾಹುಲರ ಅಮ್ಮ. ಪ್ರತೀ ಭಾನುವಾರದಂತೆ ಇಂದೂ ಬೆಳಿಗ್ಗೆ ಬೇಗ ಹೊರಡುವ ನಿಮಗೆ ಬಿಸಿನೀರು ಕಾಯಿಸಿ ಕೂತಿರುವ ಅಮ್ಮ , ನೀವು ಬರುತ್ತೀರಿ ಅಂತ ಕಾದ ಸ್ವಯಂಸೇವಕರು ಕಾರ್ಯಕರ್ತರೆಲ್ಲರಿಗೂ ನೀವು ಮತ್ತೆಂದೂ ಬಾರದ ದುಃಖ ತಡೆದುಕೊಳ್ಳುವ ಶಕ್ತಿ ದೇವರು ಕೊಡಲಿ ಎನ್ನುವುದೇ ಪ್ರಾರ್ಥನೆ..
“ಬದುಕಿನಿಂದ ಸಾವಿನ ಕೊಂಬೆಯ ಜಿಗಿತದ ಪಯಣದಲ್ಲಿ ಬದುಕಬೇಕು ಇದ್ದಷ್ಟು ದಿನ” ಇದು ಸ್ವತಃ ರಾಹುಲ್ ಬರೆದುಕೊಂಡಿರುವ ಸಾಲುಗಳು. ಆದರೆ ಅವರು ಬದುಕಬೇಕಷ್ಟೆ ಎಂದು ಬದುಕಿದವರಲ್ಲ. “ತ್ವದೀಯಾಯ ಕಾರ್ಯಾಯ ಬದ್ಧಾ ಕಟೀಯಮ್” ಎನ್ನುವ ಸಂಘದ ಪ್ರಾರ್ಥನೆಯ ಸಾಲಿನಂತೆ ದೇವರು ಮಾಡುವ ಕೆಲಸವಾದ ದೇಶ, ಧರ್ಮದ ಕಾರ್ಯಕ್ಕೆ ಸಾಯುವವರೆಗೂ ಕಟಿಬದ್ಧರಾಗಿ ಬದುಕಿದ ರಾಹುಲರದು ಸಣ್ಣ ಬದುಕಾದರೂ ಶ್ರೇಷ್ಟ ಬದುಕೇ.
ಅವರು ಈ ಜನ್ಮದ ಕಾರ್ಯವನ್ನು ಇಲ್ಲಿಗೆ ನಿಲ್ಲಿಸಿರಬಹುದು. ಆದರೆ ಸ್ವೀಕರಿಸಿರುವುದು ಸಂಘಕಾರ್ಯದ ವೃತವನ್ನು ಆಜನ್ಮ ಪಾಲಿಸುವ ಪ್ರತಿಜ್ಞೆ.
ಹಾಗಾಗಿ ಮುಂದಿನ ಅವರ ಎಲ್ಲಾ ಜನ್ಮಗಳಿಗೂ ತಾಯಿ ಭಾರತಿಯ ಮಡಿಲು ಮೀಸಲಾಗಿಯೇ ಇರುತ್ತದೆ. ಆದಷ್ಟು ಬೇಗ ಬನ್ನಿ ರಾಹುಲ್… ಶತಾಬ್ಧಿಯ ಈ ಕಾರ್ಯದಲ್ಲಿ ನಮ್ಮೊಂದಿಗೆ ನೀವಿಲ್ಲದಿದ್ದರೆ ಹೇಗೆ…..?
ದುಃಖತಪ್ತ ಸ್ವಯಂ ಸೇವಕರು